ಚಂಡೀಗಢ(ಮಾ.11): ಕೃಷಿ ಕಾಯ್ದೆ ವಿರೋಧಿ ಹೋರಾಟದ ಕೇಂದ್ರ ಸ್ಥಳವಾಗಿರುವ ಹರ್ಯಾಣದಲ್ಲಿ ಬಿಜೆಪಿ-ಜೆಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. ಈ ಮೂಲಕ ಕೃಷಿ ಕಾಯ್ದೆ ವಿವಾದ ಕೆದಕಿ ಸರ್ಕಾರ ಬೀಳಿಸುವ ಕಾಂಗ್ರೆಸ್‌ ಯತ್ನಕ್ಕೆ ಹಿನ್ನಡೆಯಾಗಿದೆ.

90 ಸದಸ್ಯ ಬಲದ ವಿಧಾನಸಭೆಯಲ್ಲಿ ಈಗ 88 ಶಾಸಕರಿದ್ದಾರೆ. ಅವಿಶ್ವಾಸ ನಿರ್ಣಯದ ಪರ 32 ಶಾಸಕರು ಮತ ಹಾಕಿದರೆ, ನಿರ್ಣಯದ ವಿರುದ್ಧ 55 ಶಾಸಕರು ಮತ ಚಲಾಯಿಸಿದರು. ಇದರೊಂದಿಗೆ ನಿರ್ಣಯಕ್ಕೆ ಸೋಲಾಯಿತು. ಇದಕ್ಕೂ ಮುನ್ನ ನಿರ್ಣಯ ಮಂಡಿಸಿ ಮಾತನಾಡಿದ ವಿಪಕ್ಷ ನಾಯಕ ಭೂಪಿಂದರ್‌ ಸಿಂಗ್‌ ಹೂಡಾ, ‘ಕೃಷಿ ಕಾಯ್ದೆ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿವೆ.

ಆಡಳಿತ ಕೂಟದ ಶಾಸಕರು ಸ್ವಕ್ಷೇತ್ರಕ್ಕೆ ಹೋಗದಂಥ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಇಬ್ಬರು ಪಕ್ಷೇತರ ಸದಸ್ಯರು ಸರ್ಕಾರಕ್ಕೆ ನೀಡಿದ ಬೆಂಬಲ ಹಿಂದಕ್ಕೆ ಪಡೆದಿದ್ದಾರೆ. ಈ ಕಾರಣಕ್ಕೇ ಅವಿಶ್ವಾಸ ನಿರ್ಣಯ ತಂದಿದ್ದೇವೆ’ ಎಂದರು.