ತಿರುವನಂತಪುರಂ[ಡಿ.02]: ಹಿಂದೂ ಮಹಾಸಾಗರ ಹಾಗೂ ಅದಕ್ಕೆ ಹೊಂದಿಕೊಂಡ ನೈಋುತ್ಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಸಂಭವಿಸಿದ್ದು, ದಕ್ಷಿಣ ಭಾರತದಲ್ಲಿ ವ್ಯಾಪಕ ಮಳೆ ಸುರಿಯಲು ಆರಂಭಿಸಿದೆ. ಇದೇ ವೇಳೆ, ಇನ್ನೊಂದು ವಾಯುಭಾರ ಕುಸಿತ ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಉಂಟಾಗುವ ಸಾಧ್ಯತೆ ಇದ್ದು, ಇನ್ನು 24 ತಾಸಿನಲ್ಲಿ ದಕ್ಷಿಣ ಭಾರತದ ಕರಾವಳಿ ತೀರಗಳನ್ನು ಅಪ್ಪಳಿಸುವ ಸಾಧ್ಯತೆ ಇದೆ. ಏಕಕಾಲಕ್ಕೆ ಎರಡೆರಡು ವಾಯುಭಾರ ಕುಸಿತಗಳು ಸಂಭವಿಸುತ್ತಿರುವ ಕಾರಣ ಮುಂದಿನ 2 ದಿನ ಭಾರೀ ಮಳೆ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಇನ್ನು ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ದಕ್ಷಿಣ ಭಾಗದಲ್ಲಿ ಈಗಾಗಲೇ ಮಳೆಯಾಗುತ್ತಿದೆ. ತಮಿಳುನಾಡಿನಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಗೆ 5 ಮಂದಿ ಬಲಿಯಾಗಿದ್ದಾರೆ.

ತಮಿಳುನಾಡಿನಲ್ಲಿ 5 ಬಲಿ:

ಕಳೆದ 2 ದಿನಗಳಿಂದ ತಮಿಳುನಾಡಿನಲ್ಲಿ ಮಳೆಯಾಗುತ್ತಿದ್ದು, ಮಳೆ ಸಂಬಂಧಿ ಘಟನೆಗಳಲ್ಲಿ ವಿವಿಧೆಡೆ ಐವರು ಬಲಿಯಾಗಿದ್ದಾರೆ. ಇನ್ನೂ 2 ದಿನ ಭಾರೀ ಮುನ್ನೆಚ್ಚರಿಕೆ ನೀಡಲಾಗಿದ್ದು, 6 ಜಿಲ್ಲೆಗಳಲ್ಲಿ ‘ರೆಡ್‌ ಅಲರ್ಟ್‌’ ಸಾರಲಾಗಿದೆ.

ತಿರುವಳ್ಳೂರು, ವೆಲ್ಲೂರು, ತಿರುವಣ್ಣಾಮಲೈ, ತೂತ್ತುಕುಡಿ, ರಾಮನಾಥಪುರಂ ಹಾಗೂ ತಿರುನೆಲ್ವೇಲಿ ಜಿಲ್ಲೆಗಳಲ್ಲಿ ‘ರೆಡ್‌ ಅಲರ್ಟ್‌’ ಘೋಷಿಸಲಾಗಿದ್ದು, ಇಲ್ಲಿ 24 ತಾಸಿನಲ್ಲಿ ಭಾರೀ ಮಳೆ (20 ಸೆಂ.ಮೀ.ಗಿಂತ ಹೆಚ್ಚು) ಬರಬಹುದು ಎಂದು ಮುನ್ಸೂಚನೆ ನೀಡಲಾಗಿದೆ.

ಭಾನುವಾರ ಬೆಳಗ್ಗಿನವರೆಗೆ ತೂತ್ತುಕುಡಿ ಜಿಲ್ಲೆಯಲ್ಲಿ ಗರಿಷ್ಠ 19 ಸೆಂ.ಮೀ., ಕಡಲೂರಿನಲ್ಲಿ 17, ತಿರುನೆಲ್ವೇಲಿಯಲ್ಲಿ 15, ಕಾಂಚೀಪುರಂನಲ್ಲಿ 13 ಸೆಂ.ಮೀ. ಮಳೆ ಸುರಿದಿದೆ. ಚೆನ್ನೈನಲ್ಲಿ 100 ಮನೆಗಳು ಭಾಗಶಃ ಮುಳುಗಿವೆ. ಇನ್ನು ಪುದುಚೇರಿಯಲ್ಲೂ ವ್ಯಾಪಕ ಮಳೆ ಬೀಳುತ್ತಿದೆ. ಹೀಗಾಗಿ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಿದೆ.

ಕೇರಳದಲ್ಲಿ ಯೆಲ್ಲೋ ವಾರ್ನಿಂಗ್‌:

ಕೇರಳದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಕೊಲ್ಲಂ, ಎರ್ನಾಕುಲಂ, ಇಡುಕ್ಕಿ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್‌’ ಮುನ್ನೆಚ್ಚರಿಕೆ ನೀಡಲಾಗಿದೆ.

ಬಿರುಗಾಳಿಯುಕ್ತ ಮಳೆ ಬೀಳುವ ಸಾಧ್ಯತೆ ಇರುವ ಕಾರಣ ಕರಾವಳಿ ತೀರದ ಜನರು ವಿದ್ಯುತ್‌ ಹಾಗೂ ವಿದ್ಯುನ್ಮಾನ ಸಾಧನಗಳನ್ನು ಬಳಸಬಾರದು. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸೂಚಿಸಲಾಗಿದೆ.

ಭಾನುವಾರವೇ ತಿರುವನಂತಪುರ, ಕಲ್ಲಿಕೋಟೆ, ಕೊಟ್ಟಾಯಂ, ತ್ರಿಶ್ಶೂರು ಹಾಗೂ ಕರಿಪುರದಲ್ಲಿ ಭಾರಿ ಮಳೆಯಾಗಿದೆ.

ಅರಬ್ಬಿ ಸಮುದ್ರ ಹಾಗೂ ಹಿಂದು ಮಹಾಸಾಗರದಲ್ಲಿ 2019ರಲ್ಲಿ ಅನೇಕ ಚಂಡಮಾರುತಗಳು ಸಂಭವಿಸಿವೆ. ವಾಯು, ಹಿಕಾ, ಕ್ಯಾರ್‌ ಹಾಗೂ ಮಹಾ ಚಂಡಮಾರುತಗಳು ಈವರೆಗೆ ಈ ವರ್ಷ ಬೀಸಿವೆ.