* ಮಹಾರಾಷ್ಟ್ರದಲ್ಲೂ ರೂಪಾಂತರಿ ಸೋಂಕು ಹೆಚ್ಚಳ* ರಾಜ್ಯಕ್ಕೆ ಕೇರಳ ಡೆಲ್ಟಾ+ ಅಪಾಯ* ಕರ್ನಾಟಕದಲ್ಲಿ ಹೈ ಅಲರ್ಟ್‌* ಗಡಿ ಹಂಚಿಕೊಂಡಿರುವ ಜಿಲ್ಲೆಗಳ ಡೀಸಿಗಳಿಗೆ ಕಟ್ಟೆಚ್ಚರಕ್ಕೆ ಸೂಚನೆ: ಡಾ| ಕೆ. ಸುಧಾಕರ್

ಬೆಂಗಳೂರು(ಜೂ.25): ನೆರೆಯ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಹಾಗೂ ಡೆಲ್ಟಾಪ್ಲಸ್‌ ಸೋಂಕು ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಆ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಕರ್ನಾಟಕಕ್ಕೆ ಹೊಸ ಆತಂಕ ಶುರುವಾಗಿದೆ. ದೇಶಾದ್ಯಂತ 2ನೇ ಅಲೆಯ ಕೊರೋನಾ ಸೋಂಕು ಇಳಿಕೆಯಾಗುತ್ತಿದ್ದರೂ ಕೇರಳದಲ್ಲಿ ಮತ್ತೆ ಏರಿಕೆಯಾಗುತ್ತಿರುವುದು ಕರ್ನಾಟಕವನ್ನು ತೀವ್ರ ಚಿಂತೆಗೀಡುಮಾಡಿದೆ.

ಈ ಹಿನ್ನೆಲೆಯಲ್ಲಿ ಕೇರಳ ಮತ್ತು ಮಹಾರಾಷ್ಟ್ರದ ಜೊತೆಗೆ ಗಡಿ ಹಂಚಿಕೊಂಡಿರು ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿನ ಪಾಸಿಟಿವಿಟಿ ದರ ಕೂಡ ಶೇ.4ರಿಂದ ಶೇ.5ರಷ್ಟಿದ್ದು, ಆ ರಾಜ್ಯದ ಗಡಿಯಲ್ಲಿ ವಿಶೇಷ ನಿಗಾ ಇಡಲಾಗುವುದು ಎಂದು ತಿಳಿಸಿದರು.

ರಾಜ್ಯದ ಮೈಸೂರು ಮತ್ತು ಬೆಂಗಳೂರಿನಲ್ಲಿ ಡೆಲ್ಟಾಪ್ಲಸ್‌ ವೈರಾಣು ಪತ್ತೆಯಾಗಿದೆ. ಇವರ ಪ್ರಾಥಮಿಕ ಸಂಪರ್ಕಿತರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅವರ ಮೇಲೆ ನಿಗಾ ಇಡಲಾಗಿದೆ ಎಂದು ಹೇಳಿದರು.

ಈ ರೂಪಾಂತರಿ ವೈರಾಣು ಮೂರನೇ ಅಲೆಯ ಸಂದರ್ಭದಲ್ಲಿ ತೊಂದರೆ ಉಂಟುಮಾಡಬಹುದು ಎಂದು ತಜ್ಞರು ಹೇಳಿದ್ದಾರೆ. ವೈರಾಣುವಿನ ಬಗ್ಗೆ ಅಧ್ಯಯನ ನಡೆಯುತ್ತಿದೆ. ಈ ಹೊಸ ರೂಪಾಂತರದ ಬಗ್ಗೆ ನಾಗರಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಜನರು ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಸದಾ ಪಾಲಿಸಿದರೆ ತೊಂದರೆ ಆಗುವುದಿಲ್ಲ. ಲಸಿಕೆ ಪಡೆಯದವರು ತಕ್ಷಣವೇ ಲಸಿಕೆ ಪಡೆದುಕೊಳ್ಳಬೇಕು ಎಂದು ಡಾ.ಸುಧಾಕರ್‌ ತಿಳಿಸಿದರು.

ಮಕ್ಕಳ ಸುರಕ್ಷತೆ ಬಗ್ಗೆ ಸರ್ಕಾರ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪದವಿ, ಡಿಪ್ಲೊಮಾ, ಐಟಿಐ ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಕಾಲೇಜುಗಳಿಂದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮಾಹಿತಿ ಪಡೆದು ಕಾಲೇಜು ಆವರಣದಲ್ಲೇ ಲಸಿಕೆ ನೀಡಲಾಗುವುದು ಎಂದು ವಿವರಿಸಿದರು.