ನವದೆಹಲಿ (ಮಾ. 02): ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಈಶಾನ್ಯ ದೆಹಲಿ ಸಹಜ ಸ್ಥಿತಿಯತ್ತ ಮರಳುತ್ತಿದ್ದು ಕಳೆದ ಮೂರು ದಿನಗಳಿಂದ ಯಾವುದೇ ಹಿಂಸಾತ್ಮಕ ಘಟನೆಗಳು ನಡೆದಿಲ್ಲ. ಭಾನುವಾರವೂ ದೆಹಲಿ ಶಾಂತವಾಗಿತ್ತು. ಆದಾಗ್ಯೂ ಬಿಗಿ ಪೊಲೀಸ್‌ ಬಂದೋಬಸ್ತ್ ಮುಂದುವರಿಸಲಾಗಿದೆ. ಜನರನ್ನು ವಿಶ್ವಾಸಕ್ಕೆ ಪಡೆಯುವ ನಿಟ್ಟಿನಿಂದ ಭದ್ರತಾ ಸಿಬ್ಬಂದಿ ಸ್ಥಳೀಯರೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದಾರೆ.

"

ದಿಲ್ಲಿ ಶಾಂತ, ನಿಷೇಧಾಜ್ಞೆ 10 ತಾಸು ಸಡಿಲಿಕೆ

ಈ ನಡುವೆ ಚರಂಡಿಗಳಲ್ಲಿ ಹೊಸದಾಗಿ ಮೂರು ಮೃತದೇಹಗಳು ಪತ್ತೆ ಆಗಿದ್ದು, ಸಾವಿನ ಸಂಖ್ಯೆ 45ಕ್ಕೆ ಏರಿಕೆ ಆಗಿದೆ. ಗೋಕುಲ್‌ಪುರಿ ಪ್ರದೇಶದಲ್ಲಿ ಇಬ್ಬರ ಮೃತ ದೇಹಗಳನ್ನು ಚರಂಡಿಯಿಂದ ಹೊರತೆಗೆಯಲಾಗಿದೆ. ಭಾಗೀರಥಿ ಕಾಲುವೆಯಲ್ಲಿ ಇನ್ನೊಂದು ಮೃತದೇಹ ಪತ್ತೆ ಆಗಿದೆ. ಆದರೆ, ಅವರ ಗುರುತು ಪತ್ತೆ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ಗಲಭೆಗೆ ಸಂಬಂಧಿಸಿದಂತೆ 254 ಎಫ್‌ಐಆರ್‌ಗಳು ದಾಖಲಾಗಿದ್ದು, 905 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಹಿಂಸಾಚಾರದಿಂದ ಈಶಾನ್ಯ ದೆಹಲಿಯಲ್ಲಿ 25 ಸಾವಿರ ಕೋಟಿ ರು. ನಷ್ಟಸಂಭವಿಸಿದೆ ಎಂದು ದೆಹಲಿ ವಾಣಿಜ್ಯ ಮಂಡಳಿ ಅಂದಾಜಿಸಿದೆ.

ದಿಲ್ಲಿ ಹಿಂಸೆ ತೋರಿಸಿ ಐಸಿಸ್‌ ಪ್ರಚೋದನೆ!

ಹಿಂಸಾಚಾರದ ವೇಳೆ 92 ಮನೆಗಳು, 57 ಅಂಗಡಿಗಳು, 500 ವಾಹನಗಳು, 2 ಶಾಲೆಗಳು, 4 ಫ್ಯಾಕ್ಟರಿಗಳು ಮತ್ತು 4 ಧಾರ್ಮಿಕ ಸ್ಥಳಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತೆ ಇರುವ ಕಾರಣದಿಂದ ಮಾ.7ರ ವರೆಗೂ ಶಾಲೆಗಳಿಗೆ ರಜೆ ನೀಡಲಾಗಿದೆ. 1,000 ಯೋಧರು ಮತ್ತು 12 ಅರೆ ಸೇನಾ ಸೇನಾ ತುಕಡಿಗಳು ದೆಹಲಿಯಲ್ಲಿ ಬೀಡು ಬಿಟ್ಟಿವೆ.