ದೆಹಲಿಯಲ್ಲಿ ಭಾರೀ ಮಳೆ: 46 ವರ್ಷಗಳ ಗರಿಷ್ಠ!
* ಮಳೆಯಿಂದಾಗಿ ವಿಮಾನ ನಿಲ್ದಾಣ ಜಲಾವೃತ
* ದೆಹಲಿಯಲ್ಲಿ ಭಾರೀ ಮಳೆ: 46 ವರ್ಷಗಳ ಗರಿಷ್ಠ
* ಈ ಋುತುವಿನಲ್ಲಿ 1,100 ಮಿ.ಮೀಟರ್ ಮಳೆ
* 1975ರಲ್ಲಿ 1,150 ಮಿ.ಮೀಟರ್ ಮಳೆ ಆಗಿತ್ತು
ನವದೆಹಲಿ(ಸೆ.12): ರಾಷ್ಟ್ರ ರಾಜಧಾನಿ ದೆಹಲಿ ಶನಿವಾರ ಹಿಂದೆಂದೂ ಕಂಡು ಕೇಳರಿಯದ ಭಾರೀ ದಾಖಲೆ ಮಳೆಗೆ ಸಾಕ್ಷಿಯಾಗಿದ್ದು, 46 ವರ್ಷದ ದಾಖಲೆ ನಿರ್ಮಿಸಿದೆ. ಇದರಿಂದ, ವಿಮಾನ ನಿಲ್ದಾಣ ಜಲಾವೃತವಾಗಿ ಕೆಲಕಾಲ ವಿಮಾನ ಹಾರಾಟ ಸ್ತಬ್ಧವಾದ ಪ್ರಸಂಗ ನಡೆದಿದೆ.
ಶನಿವಾರ ಮುಂಜಾನೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 94.7 ಮಿ.ಮೀಟರ್ ಮಳೆ ಸುರಿದಿದೆ. ಪ್ರಸಕ್ತ ಮುಂಗಾರು ಋುತುವಿನ ಅವಧಿಯಲ್ಲಿ 1,100 ಮಿ.ಮೀಟರ್ ಮಳೆ ಆಗಿದ್ದು, 46 ವರ್ಷಗಳಲ್ಲೇ ಗರಿಷ್ಠ ಎನಿಸಿಕೊಂಡಿದೆ. ಈ ಮುನ್ನ 1975ರಲ್ಲಿ 1,150 ಮಿ.ಮೀಟರ್ ಮಳೆ ಆಗಿದ್ದು ಇದುವರೆಗಿನ ಗರಿಷ್ಠ ಎನಿಸಿಕೊಂಡಿತ್ತು. ಇದಕ್ಕೂ ಮುನ್ನ 2003ರಲ್ಲಿ 1,050 ಮಿ.ಮೀಟರ್ ಮಳೆಯಾಗಿತ್ತು.
ದೆಹಲಿಯಲ್ಲಿ ಭಾನುವಾರ ಮುಂಜಾನೆಯವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದೇ ವೇಳೆ ದೆಹಲಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸುರಿದ ಮಳೆಯ ಪ್ರಮಾಣ ಕಳೆದ 121 ವರ್ಷಗಳಲ್ಲಿಯೇ ದೈನಂದಿನ ಗರಿಷ್ಠ ಎನಿಸಿಕೊಂಡಿದೆ. ಸೆಪ್ಟೆಂಬರ್‌ವೊಂದರಲ್ಲಿಯೇ 390 ಮಿ.ಮೀಟರ್ ಮಳೆ ಸುರಿದಿದೆ. ಇದು ಕೂಡ 77 ವರ್ಷಗಳ ಗರಿಷ್ಠ ಎನಿಸಿಕೊಂಡಿದೆ. 1944 ಸೆಪ್ಟೆಂಬರ್‌ನಲ್ಲಿ 417 ಮಿ.ಮೀಟರ್ ಮಳೆ ಆಗಿತ್ತು. ಆ ಬಳಿಕ ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಅತ್ಯಧಿಕ ಮಳೆ ಇದಾಗಿದೆ. ಇನ್ನು ದೆಹಲಿಯಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 1139 ಮಿ.ಮೀಟರ್ ಮಳೆಯಾಗಿದೆ.
ವಿಮಾನ ನಿಲ್ದಾಣ ಜಲಾವೃತ:
ಶನಿವಾರ ಸುರಿದ ಭಾರೀ ಮಳೆಯ ಪರಿಣಾಮವಾಗಿ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು. ಬೆಳಗ್ಗೆ 9ರವರೆಗೆ ಹಾರಾಟ ಸ್ತಬ್ಧವಾಗಿತ್ತು. ಹವಾಮಾನ ವೈಪರಿತ್ಯ ಪರಿಣಾಮ ಒಂದು ಅಂತಾರಾಷ್ಟ್ರೀಯ ವಿಮಾನ ಸೇರಿ 5 ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. ದಕ್ಷಿಣ ದೆಹಲಿಯ ಮೋತಿ ಬಾಗ್ ಮತ್ತು ಆರ್‌ಕೆ ಪುರಂ ಮತ್ತಿತರ ಭಾಗಗಳೂ ನೀರಿನಿಂದ ಜಲಾವೃತವಾಗಿದ್ದವು. ರಸ್ತೆಯಲ್ಲಿ ನೀರು ನಿಂತಿರುವ ಕಾರಣ ಭಾರೀ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.