ಜಯಾ ಜೇಟ್ಲಿಗೆ 4 ವರ್ಷ ಜೈಲು: ಕೆಲ ತಾಸಲ್ಲೇ ತಡೆ| ರಕ್ಷಣಾ ವ್ಯವಹಾರದಲ್ಲಿನ ಲಂಚ ಪ್ರಕರಣ

ನವದೆಹಲಿ(ಜು.31): ರಕ್ಷಣಾ ವ್ಯವಹಾರದಲ್ಲಿ 20 ವರ್ಷ ಹಿಂದೆ ನಡೆದಿದ್ದ ಲಂಚಾವತಾರಕ್ಕೆ ಸಂಬಂಧಿಸಿದಂತೆ ಸಮತಾ ಪಾರ್ಟಿ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಹಾಗೂ ಇತರ ಇಬ್ಬರಿಗೆ ದಿಲ್ಲಿ ಸಿಬಿಐ ನ್ಯಾಯಾಲಯ 4 ವರ್ಷಗಳ ಜೈಲು ಸಜೆ ವಿಧಿಸಿದೆ. ಈ ಹಗರಣದ ಮೂಲಕ ಇವರು ಇಡೀ ದೇಶದ ಭದ್ರತಾ ವ್ಯವಸ್ಥೆಯೊಂದಿಗೇ ರಾಜಿ ಮಾಡಿಕೊಂಡಿದ್ದಾರೆ ಎಂದು ಅದು ಕಿಡಿಕಾರಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೇಟ್ಲಿ ಅವರ ಜತೆ, ಅವರ ಮಾಜಿ ಸಹೋದ್ಯೋಗಿ ಗೋಪಾಲ್‌ ಪಚೇರ್‌ವಾಲ್‌ ಹಾಗೂ ಮೇ| ಜ| (ನಿವೃತ್ತ) ಎಸ್‌.ಪಿ. ಮುರ್ಗಾಯಿ ಅವರಿಗೂ ಕಾರಾಗೃಹ ಶಿಕ್ಷೆ ನೀಡಲಾಗಿದೆ. ಭ್ರಷ್ಟಾಚಾರ, ಕ್ರಿಮಿನಲ್‌ ಸಂಚು ಆರೋಪದ ಮೇರೆಗೆ ಇವರಿಗೆ ಕೋರ್ಟು ಜೈಲು ಸಜೆ ಹಾಗೂ ತಲಾ 1 ಲಕ್ಷ ರು. ದಂಡ ವಿಧಿಸಿದೆ. ತೆಹೆಲ್ಕಾ ನಿಯತಕಾಲಿಕೆ ನಡೆಸಿದ ರಹಸ್ಯ ಕಾರ್ಯಾಚರಣೆ ಆಧರಿಸಿ ಸಿಬಿಐ ಇದರ ವಿಚಾರಣೆ ನಡೆಸಿತ್ತು.

ಸಾಕಾಗಿ ಕೊನೆಗೂ ಸಿಡಿದೆದ್ದ ಕುಮಾರಸ್ವಾಮಿ, ಕಾಂಗ್ರೆಸ್‌–ಬಿಜೆಪಿಗೆ ತಲಾ 5 ಪ್ರಶ್ನೆಗಳು...!

ಈ ಕುರಿತ ತೀರ್ಪು ಪ್ರಕಟಿಸಿದ ಸಿಬಿಐ ವಿಶೇಷ ನ್ಯಾಯಾಧೀಶ ವೀರೇಂದ್ರ ಭಟ್‌, ‘ರಕ್ಷಣಾ ವ್ಯವಹಾರದಲ್ಲಿ ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಇರಬೇಕು. ಭ್ರಚ್ಟಾಚಾರದಿಂದ ದೇಶದ ಸಾರ್ವಭೌಮತೆ ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ’ ಎಂದು ಹೇಳಿದರು. ಬಳಿಕ ಗುರುವಾರ ಸಂಜೆ 5 ಗಂಟೆಯೊಳಗೆ ಶರಣಾಗಲು ಸೂಚಿಸಿದರು.

ಆದರೆ, ದೋಷಿಗಳು ಕೂಡಲೇ ದಿಲ್ಲಿ ಹೈಕೋರ್ಟ್‌ ಮೊರೆ ಹೋದ ಪರಿಣಾಮ, ತೀರ್ಪಿಗೆ ಹೈಕೋರ್ಟ್‌ ತಡೆ ನೀಡಿದೆ. ಹೀಗಾಗಿ ಜೇಟ್ಲಿ ಸೇರಿದಂತೆ ಮೂವರಿಗೂ ತಾತ್ಕಾಲಿಕ ನಿರಾಳತೆ ಲಭಿಸಿದೆ.

ಪ್ರಕರಣ ಏನು?:

ರಕ್ಷಣಾ ಇಲಾಖೆಗೆ ಸಂಬಂಧಿಸಿದ ‘ಹ್ಯಾಂಡ್‌ ಹೆಲ್ಡ್‌ ಥರ್ಮಲ್‌ ಇಮೇಜರ್‌’ಗಳನ್ನು ಖರೀದಿಸುವ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಜನವರಿ 2001ರಲ್ಲಿ ‘ತೆಹೆಲ್ಕಾ’ ನಿಯತಕಾಲಿಕೆ ಬಯಲು ಮಾಡಿತ್ತು. ಇದಕ್ಕಾಗಿ ‘ಆಪರೇಷನ್‌ ವೆಸ್ಟ್‌ಎಂಡ್‌’ ಎಂಬ ರಹಸ್ಯ ಕಾರ್ಯಾಚರಣೆ ನಡೆಸಿತ್ತು. 2000ನೇ ಡಿಸೆಂಬರ್‌ ಹಾಗೂ 2001ರ ಜನವರಿಯಲ್ಲಿ ಈ ಅಕ್ರಮ ನಡೆದಿದೆ ಎಂದು ಅದು ವರದಿ ಮಾಡಿತ್ತು.

'ಶ್ರೀರಾಮುಲು ಕೊಟ್ಟ ಲೆಕ್ಕವನ್ನು ಎಷ್ಟೇ ಕೂಡಿಸಿ ಕಳೆದ್ರೂ 100 ಕೋಟಿ ರೂ. ದಾಟುವುದಿಲ್ಲ'

ಈ ಕುರಿತ ವಿಚಾರಣೆ ನಡೆಸಿದ ಕೋರ್ಟ್‌, ‘ಥರ್ಮಲ್‌ ಇಮೇಜರ್‌ ಖರೀದಿ ವ್ಯವಹಾರದಲ್ಲಿ ಜೇಟ್ಲಿ ಅವರು ತಮ್ಮ ಸಹೋದ್ಯೋಗಿ ಪಚೇರ್‌ವಾಲ್‌ ಮುಖಾಂತರ ವೆಸ್ಟ್‌ಎಂಡ್‌ ಕಂಪನಿ ಪ್ರತಿನಿಧಿಯಿಂದ 2 ಲಕ್ಷ ರು. ಲಂಚ ಸ್ವೀಕರಿಸಿದ್ದಾರೆ. ಮುರ್ಗಾಯಿ ಅವರು 20 ಸಾವಿರ ರು. ಪಡೆದಿದ್ದಾರೆ. ಸೇನೆಗೆ ಥರ್ಮಲ್‌ ಇಮೇಜರ್‌ಗಳನ್ನು ಪೂರೈಸುವ ‘ಸಪ್ಲೈ ಆರ್ಡರ್‌’ ಪಡೆಯಲು ಇವರು ರುಷುವತ್ತು ಪಡೆದಿದ್ದಾರೆ’ ಎಂದು ಹೇಳಿದ್ದು, ಸಿಬಿಐ ದೋಷಾರೋಪ ದೃಢೀಕರಿಸಿದೆ.