ನವದೆಹಲಿ(ಏ.07): ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮೊದಲ ಅಲೆಗಿಂತಲೂ ಎರಡನೇ ಅಲೆ ಭಾರೀ ಆತಂಕ ಸೃಷ್ಟಿಸಿದೆ. ಹೀಗಿರುವಾಗ ದೆಹಲಿ ಹೈಕೋರ್ಟ್‌ ಕೊರೋನಾ ನಿಯಮಗಳಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಪ್ರಕಟಿಸಿದ್ದು, ಇದು ಕಾರು ಚಾಲಕರಿಗೆ ಕೊಂಚ ತಲೆ ನೋವು ನೀಡಿದೆ.  ಕಾರು ಸಾರ್ವಜನಿಕ ಸ್ಥಳ, ಹೀಗಾಗಿ ಇಲ್ಲಿಯೂ ಕೊರೋನಾ ನಿಯಮಗಳು ಅನ್ವಯಿಸುತ್ತವೆ. ಕಾರಿನಲ್ಲೇ ಒಬ್ಬರೇ ಪ್ರಯಾಣಿಸುತ್ತಿದ್ದರೂ ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ದೆಹಲಿ ಹೈಕೋರ್ಟ್‌ ಬುಧವಾರ ಹೇಳಿದೆ.

ಒಬ್ಬನೇ ಪ್ರಯಾಣಿಸುತ್ತಿದ್ದರೂ ಮಾಸ್ಕ್‌ ಹಾಕದ್ದಕ್ಕೆ ಪೊಲೀಸರು 500 ರೂ. ದಂಡ ಹಾಕಿರುವುದನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ್ದ ಸೌರಭ್‌ ಶರ್ಮಾ ಮತ್ತು ಇನ್ನಿತರ ಮೂವರ ಅರ್ಜಿ ವಿಚಾರಣೆ ನಡೆಸಿದೆ. ವಾದ, ಪ್ರತಿವಾದ ಆಲಿಸಿದ ದೆಹಲಿ ಹೈಕೊರ್ಟ್‌ನ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್‌ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರೂ ಮಾಸ್ಕ್‌ ಹಾಕಲು ಯಾಕೆ ನಿರಾಕರಿಸುತ್ತೀರಿ? ಇದು ನಮ್ಮದೇ ಸುರಕ್ಷತೆಗಾಗಿ. ಮಾಸ್ಕ್ ಸುರಕ್ಷಾ ಕವಚವಿದ್ದಂತೆ. ಸಾಂಕ್ರಾಮಿಕ ಬಿಕ್ಕಟ್ಟು ಹೆಚ್ಚಾಗಿದೆ. ಹೀಗಿರುವಾಗ ಮಾಸ್ಕ್ ಧರಿಸುವುದು ಕಡ್ಡಾಯ ಎಂದಿದೆ.

ಒಂಟಿ ಚಾಲಕ ಮಾಸ್ಕ್ ಧರಿಸಬೇಕೆಂಬ ನಿಯಮವಿಲ್ಲ ಎಂದು ಹೈಕೋರ್ಟ್‍ಗೆ ತಿಳಿಸಿದ ಕೇಂದ್ರ ಆರೋಗ್ಯ ಸಚಿವಾಲಯ, ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ನಿಯಮಗಳನ್ನು ರೂಪಿಸುವ ಹಾಗೂ ಅವುಗಳನ್ನು ಜಾರಿಗೊಳಿಸುವ ಹಕ್ಕಿದೆ ಎಂದೂ ಕೋರ್ಟ್‌ ತಿಳಿಸಿದೆ.