ನವದೆಹಲಿ[ಫೆ.11]: ದೆಹಲಿ ವಿಧಾನಸಭಾ ಚುನಾವಣೆ 2020ರ ಫಲಿತಾಂಶ ಕೆಲ ಗಂಟೆಗಳಲ್ಲಿ ಹೊರ ಬೀಳಲಿದೆ. ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಕೇಜ್ರೀವಾಲ್ ನೇತೃತ್ವದ ಆಪ್ ಮುನ್ನಡೆ ಸಾಧಿಸಿದೆ. ಇನ್ನು ಗೆಲುವಿನತ್ತ ದಾಪುಗಾಲಿಡುತ್ತಿರುವ ಆಪ್ ಪಕ್ಷದ ಕಾರ್ಯಕರ್ತರು ಕುಣಿದು ಕುಪ್ಪಳಿಸಲಾರಂಭಿಸಿದ್ದಾರೆ. ಹೀಗಿರುವಾಗ ಚುನಾವಣಾ ಫಲಿತಾಂಶ ಹೊರತುಪಡಿಸಿ ಫೆ. 11 ದೆಹಲಿ ಸಿಎಂ ಕೇಜ್ರೀವಾಲ್ ಗೆ ಮತ್ತೊಂದು ಕಾರಣಕ್ಕಾಗಿ ವಿಶೇಷವಾಗಿದೆ. ಇಂದು ಅವರ ಪತ್ನಿ ಸುನೀತಾ ಹುಟ್ಟುಹಬ್ಬವಾಗಿದೆ. ಹೀಗಿರುವಾಗ ಕೇಜ್ರೀವಾಲ್ ಪತ್ನಿಗೆ ಗೆಲುವಿನ ಕೊಡುಗೆ ನೀಡಲು ಸಜ್ಜಾಗಿದ್ದಾರೆಂಬುವುದರಲ್ಲಿ ಅನುಮಾನವಿಲ್ಲ.

ಆಮ್ ಆದ್ಮಿ ಪಕ್ಷದ ಸಂಭಾವ್ಯ ಗೆಲುವಿನಿಂದ ಸುನಿತಾ ಕೇಜ್ರೀವಾಲ್ ಹುಟ್ಟುಹಬ್ಬದ ಸಂಭ್ರಮ ದ್ವಿಗುಣವಾಗಿದೆ. ಕೇಜ್ರೀವಾಳ್ ಮನೆಗೆ ಪಕ್ಷದ ಕಾರ್ಯಕರ್ತರ ದಂಡೇ ಆಗಮಿಸುತ್ತಿದ್ದು, ದೆಹಲಿ ಸಿಎಂಗೆ ಗೆಲುವಿನ ಹಾಗೂ ಅವರ ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಆಮ್ ಆದ್ಮಿ ಪಕ್ಷ ಗೆದ್ದಿರುವುದನ್ನು ಅಧಿಕೃತವಾಗಿ ಪ್ರಕಟಿಸಿದ ಬಳಿಕ ಕಚೇರಿಗೆ ತೆರಳಲಿರುವ ಕೇಜ್ರೀವಾಲ್ ಅಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಖುದ್ದು ದೆಹಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಅರವಿಂದ ಕೇಜ್ರೀವಾಲ್ ಎಲ್ಲರಿಗಿಂತ ಅಧಿಕ ಲೀಡ್ ಹೊಂದಿದ್ದಾರೆ.