ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿದೆ. ಇದರ ತೀರ್ಪು ಬರುವವರೆಗೂ ಅದನ್ನು ಕೇಂದ್ರಾಡಳಿತ ಪ್ರದೇಶ ಮಾಡಲು ಸಂಸದರೋರ್ವರು ಹೇಳಿಕೆ ನೀಡಿದ್ದಾರೆ. 

ಬೆಳಗಾವಿ (ಫೆ.15): ನ್ಯಾಯಾಲಯದಲ್ಲಿರುವ ಗಡಿವಿವಾದ ಪ್ರಕರಣವು ಇತ್ಯರ್ಥವಾಗುವವರೆಗೆ ಬೆಳಗಾವಿ ಸೇರಿ ಮರಾಠಿ ಭಾಷಿಕ ಪ್ರದೇಶಗಳನ್ನು ಕೇಂದ್ರ ಆಡಳಿತ ಪ್ರದೇಶವನ್ನಾಗಿ ಕೇಂದ್ರ ಸರ್ಕಾರ ಘೋಷಿಸಬೇಕು ಎಂದು ಲೋಕಸಭೆಯಲ್ಲಿ ಮಹಾರಾಷ್ಟ್ರದ ಶಿವಸೇನೆ ಸಂಸದ ರಾಹುಲ್‌ ಶೆವಾಳೆ ಆಗ್ರಹಿಸಿದ್ದಾರೆ.

Add Asianetnews Kannada as a Preferred SourcegooglePreferred

ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿದೆ. ಮಹಾರಾಷ್ಟ್ರಕ್ಕೆ ಕರ್ನಾಟಕದ ಗಡಿಯ 7 ಸಾವಿರ ಕಿ.ಮೀ. ಪ್ರದೇಶ ಬರುತ್ತದೆ. ಬೆಳಗಾವಿ, ಕಾರವಾರ, ಬೀದರ್‌, ಕಲಬುರಗಿ, ನಿಪ್ಪಾಣಿಯ 814 ಹಳ್ಳಿಗಳು ಮರಾಠಿ ಭಾಷಿಕ ಪ್ರದೇಶ ಇವೆ. 1956ರಲ್ಲಿ ರಾಜ್ಯ ಪುನರ್‌ವಿಂಗಡನೆ ವೇಳೆ ಈ ಎಲ್ಲಾ ಹಳ್ಳಿಗಳು ಕರ್ನಾಟಕಕ್ಕೆ ಸೇರ್ಪಡೆಯಾಗಿವೆ. ಕಳೆದ 2020 ರ ಮಾಚ್‌ರ್‍ 17 ರಂದು ನಡೆಯಬೇಕಾಗಿದ್ದ ವಿಚಾರಣೆಯು ಕೋವಿಡ್‌ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಹೀಗಾಗಿ ಕೋರ್ಟ್‌ ತೀರ್ಪು ಬರುವ ವರೆಗೂ ಆ ಪ್ರದೇಶಗಳನ್ನು ಕೇಂದ್ರ ಆಡಳಿತ ಪ್ರದೇಶವಾಗಿ ಘೋಷಿಸಬೇಕು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸಹ ಇದನ್ನು ಒತ್ತಾಯಿಸಿದ್ದಾರೆ ಎಂದು ತಿಳಿಸಿದರು.

ಉದ್ಧವ್ ಉದ್ಧಟತನಕ್ಕೆ ಮರಾಠಿಗರಿಂದಲೇ ವಿರೋಧ: ಮೊದ್ಲು ಮಹಾರಾಷ್ಟ್ರದ ಸಮಸ್ಯೆ ಪರಿಹರಿಸಿ ಎಂದ ಜನ ...

ಇದಕ್ಕೆ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಬೆಳಗಾವಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯವಾಗಿ ರಾಜ್ಯದ ಸಂಸದರು ಧ್ವನಿ ಎತ್ತದಿರುವುದು ಅತ್ಯಂತ ಶೋಚನೀಯ. ನ್ಯಾಯಾಲಯದಲ್ಲಿ ಗಡಿವಿವಾದ ಬಾಕಿ ಇರುವಾಗ ಆ ಪ್ರಕರಣದ ಬಗ್ಗೆ ಮಾತನಾಡುವುದು, ಚರ್ಚಿಸುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಯಾವ ಸಂಸದರೂ ಎದಿರೇಟು ಕೊಡಲಿಲ್ಲವೇಕೆ ಎಂದು ಪ್ರಶ್ನಿಸಿದರು.