Mom Weds New Dad : ಒಂಟಿಯಾಗಿದ್ದ ಅಮ್ಮಂಗೆ ಮದುವೆ ಮಾಡಿಸಿದ ಮಗಳು... ನೆಟ್ಟಿಗರ ಹೃದಯ ಗೆದ್ದ ನಡೆ
- ಒಂಟಿಯಾಗಿದ್ದ ಅಮ್ಮನಿಗೆ ಮರು ಮದುವೆ ಮಾಡಿಸಿದ ಮಗಳು
- ಟ್ವಿಟ್ಟರ್‌ನಲ್ಲಿ ಪೋಸ್ಟ್ ವೈರಲ್
- ಮಗಳ ನಿರ್ಧಾರಕ್ಕೆ ಭೇಷ್ ಎಂದ ನೆಟ್ಟಿಗರು
ಮುಂಬೈ(ಡಿ.17): ಕೌಟುಂಬಿಕ ಕಲಹದ ಕಾರಣಕ್ಕೆ ತನ್ನ ಮೊದಲನೇ ವಿವಾಹವನ್ನು ಮುರಿದುಕೊಂಡು ಒಂಟಿಯಾಗಿದ್ದ ತಾಯಿಗೆ 15 ವರ್ಷಗಳ ನಂತರ ಮಗಳೇ ಮುಂದೆ ನಿಂತು ಮದುವೆ ಮಾಡಿಸಿದ ಘಟನೆ ನಡೆದಿದೆ. ಇದು ಭಾರತದಲ್ಲೇ ನಡೆದ ಮದುವೆಯಾಗಿದ್ದು, ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಸಂಪೂರ್ಣ ವಿವರಗಳಿಲ್ಲ. @alphaw1fe ಹೆಸರಿನಲ್ಲಿ ಟ್ವಿಟ್ಟರ್ ಖಾತೆ ಹೊಂದಿರುವ ಹುಡುಗಿಯೊಬ್ಬಳು ತನ್ನ ತಾಯಿಗೆ ಮದುವೆ ಮಾಡಿಸಿದ್ದಾಗಿ ಮದುವೆಗೆ ಮೊದಲಿನ ನಿಶ್ಚಿತಾರ್ಥದ ಫೋಟೋಗಳು ಹಾಗೂ ತಾಯಿ ಮದುವೆಗೆ ಸಿದ್ಧಗೊಳ್ಳುತ್ತಿರುವ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಇದಕ್ಕೆ ನೆಟ್ಟಿಜನ್‌ಗಳು ಭೇಷ್ ಎಂದಿದ್ದಾರೆ.
ಮತ್ತೆ ಪ್ರೀತಿಯನ್ನು ಹುಡುಕಲು ವಯಸ್ಸು ಅಡ್ಡಿಯಾಗದಿದ್ದರೂ, ಮಹಿಳೆ ಮತ್ತೆ ಮದುವೆಯಾಗಲು ಬಂದಾಗ, ಯಾವಾಗಲೂ ಕೆಲವು ಅಡ್ಡಿ ಆತಂಕಗಳು ಸಹಜವಾಗಿ ಕಾಡುವವು. ಆದರೂ ಇಲ್ಲೊಬ್ಬಳು ಯುವತಿ ಮಾಡಿದ ಕ್ರಾಂತಿಕಾರಿ ನಿರ್ಧಾರಕ್ಕೆ ನೆಟ್ಟಿಗರು ವಾವ್ ಎನ್ನುತ್ತಿದ್ದು, ಶುಭ ಹಾರೈಸುತ್ತಿದ್ದಾರೆ.
@alphaw1feಎಂಬ ಹೆಸರಿನಲ್ಲಿ ಟ್ವಿಟ್ಟರ್ ಖಾತೆ ಹೊಂದಿರುವ ಯುವತಿ ತನ್ನ ತಾಯಿಯ ವಿವಾಹದ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ನನ್ನ ತಾಯಿ ಮದುವೆಯಾಗುತ್ತಿದ್ದಾರೆ ಎಂದರೆ ನಂಬಲೇ ಆಗುತ್ತಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ. ನನ್ನ ತಾಯಿ ತನ್ನ ಹೊಸ ಜೀವನ ಪ್ರಾರಂಭಿಸಲು ಎಷ್ಟು ಸಂತೋಷವಾಗಿದ್ದಾರೆ ನೋಡಿ ಎಂದು ಆಕೆ ಮತ್ತೊಂದು ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಫೋಸ್ಟ್ ಮಾಡಿದ್ದಾಳೆ.
ಈ ಟ್ವೀಟ್ ಸಾಕಷ್ಟು ಗಮನ ಸೆಳೆದಿದ್ದು, ಶುಭ ಹಾರೈಕೆಗಳು ಹರಿದು ಬರುತ್ತಿದ್ದಂತೆ, ಯುವತಿ ಪ್ರತಿಕ್ರಿಯಿಸಿದ್ದು, 'ತನ್ನ ತಾಯಿ ಸುಮಾರು 15 ವರ್ಷಗಳ ಹಿಂದೆ ಒಂದು ಬಯಸದ ವಿವಾಹ ಸಂಬಂಧದಿಂದ ಹೊರ ನಡೆದಿದ್ದಳು. ಆದರೆ ನಾನು ಮತ್ತು ನನ್ನ 16 ವರ್ಷದ ಸಹೋದರ ನಮ್ಮ ಕುಟುಂಬಕ್ಕೆ ಒಬ್ಬ ಹೊಸ ವ್ಯಕ್ತಿಯನ್ನು ಕರೆ ತರಲು ಬಯಸಿದ್ದೇವೆ. ನಮ್ಮ ಜೀವನದಲ್ಲಿ ತಂದೆಯ ವ್ಯಕ್ತಿತ್ವವನ್ನು ಸ್ವಾಗತಿಸಲು ನಾವು ತುಂಬಾ ಸಂತೋಷಪಡುತ್ತೇವೆ ಎಂದು ಹುಡುಗಿ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾಳೆ.
ವಿಧವೆ ಸೊಸೆಗೆ ಮರು ವಿವಾಹ: ಭೇಷ್ ಅತ್ತೆ ಭೇಷ್..!
ಈ ಪೋಸ್ಟ್‌ಗಳು ಮತ್ತಷ್ಟು ವೈರಲ್ ಆಗುತ್ತಿದ್ದಂತೆ ಯುವತಿ ತನ್ನ ತಾಯಿಯ ಉಂಗುರ ಬದಲಾಯಿಸುವ ಸಮಾರಂಭ ನಿಶ್ಚಿತಾರ್ಥದ (Engagement) ಫೋಟೋಗಳನ್ನು ಕೂಡ ಶೇರ್ ಮಾಡಿದ್ದಾಳೆ. 'ಪ್ರೀತಿಯನ್ನು ಹುಡುಕಲು ತಡವಾಗಿಲ್ಲ, ಹುಡುಗಿ ನೀನು ತುಂಬಾ ಒಳ್ಳೆಯ ಕೆಲಸ ಮಾಡಿದ್ದಿ, ಸಮಾಜ ಮತ್ತು ಸಂಸ್ಕೃತಿಗಾಗಿ ನಿಮ್ಮ ಸಂತೋಷವನ್ನು ತ್ಯಾಗ ಮಾಡಬೇಕಿಲ್ಲ ಯಾರು ನಿಮ್ಮ ತ್ಯಾಗದ ಬಗ್ಗೆ ವಿವೇಚನೆ ಹೊಂದಿರುವುದಿಲ್ಲದಿದ್ದಾಗ ಅವರೊಂದಿಗೆ ನೀವು ಇದ್ದು ಪ್ರಯೋಜನವಿಲ್ಲ. ಇದರಿಂದ ನೀವೇ ಬಳಲುತ್ತೀರಿ' ಹೀಗೆಲ್ಲಾ ನೆಟ್ಟಿಜನ್‌ಗಳು ಕಾಮೆಂಟ್ ಮಾಡಿದ್ದು, ಈ ವಿವಾಹಕ್ಕೆ ಒಂದು ಶುಭ ಹಾರೈಕೆಗಳು ಹರಿದು ಬರುತ್ತಿವೆ.
ವಿವಾಹ ಎಂಬುದು ಒಂದು ಸುಂದರವಾದ ಅನುಬಂಧ ಆದರೆ ಗಂಡು ಹೆಣ್ಣಿನ ಮಧ್ಯೆ ಸಾಮರಸ್ಯವಿಲ್ಲದಿದ್ದರೆ ಅದೊಂದು ನರಕವೇ ಸರಿ. ಎಲ್ಲರ ದಾಂಪತ್ಯ ಜೀವನ ಸುಂದರವಾಗಿರುತ್ತದೆ ಎಂದು ಹೇಳಲಾಗದು. ಬಹುತೇಕ ಮಹಿಳೆಯರು ತಮಗೆ ದಾಂಪತ್ಯದಲ್ಲಿ ನೆಮ್ಮದಿ ಇಲ್ಲದಿದ್ದರೂ ಮಕ್ಕಳು ಕುಟುಂಬದ ಮುಖ ನೋಡಿ ತಮ್ಮ ನೆಮ್ಮದಿಯನ್ನು ಪಕ್ಕಕಿಟ್ಟು ನೀರಿಗಿಳಿದಾದ ಮೇಲೆ ಈಜಲೇಬೇಕು ಎಂದು ಭಾವಿಸಿ ಅದೇ ಸಂಬಂಧದಲ್ಲಿ ನೆಲೆ ನಿಲ್ಲುತ್ತಾರೆ. ಬದುಕಲೇ ಆಗದು ಎಂಬಂತಹ ಸನ್ನಿವೇಶಗಳಿದ್ದಲ್ಲಿ ಎಲ್ಲ ಅಪವಾದಗಳನ್ನು ಮೆಟ್ಟಿ ನಿಂತು ದೂರ ಸಾಗಿ ಬಂದು ಹೊಸ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಾರೆ. ಪುರುಷರು ಮರು ವಿವಾಹವನ್ನು ಯಾವುದೇ ಚಿಂತೆಗಳಿಲ್ಲದೇ ಆಗುತ್ತರಾದರೂ ಸ್ತ್ರೀಯರು ಮರು ವಿವಾಹವಾಗುವುದು ತೀರಾ ವಿರಳ. ಆದರೆ ಇಂದು ಕಾಲ ಬದಲಾಗಿದ್ದು, ಮಹಿಳೆಯರು ಕೂಡ ಮರು ವಿವಾಹಕ್ಕೆ ಮುಂದಾಗುತ್ತಾರೆ.
Robot Wants To be A Mother: : ಎಂದಿರನ್ ಕಥೆಗಿಂತ ಕಮ್ಮಿ ಇಲ್ಲ, ರೋಬೋಟ್‌ಗೆ ಅಮ್ಮನಾಗೋ ಆಸೆ
ಯೌವ್ವನಕ್ಕಿಂತಲೂ ಇಳಿ ವಯಸ್ಸಿನ ಕಾಲಕ್ಕೆ ಬಹುತೇಕರಿಗೆ ಸಂಗಾತಿ ಬೇಕು ಎನಿಸುವುದು ಇಂದಿನ ಕಾಲಘಟ್ಟದಲ್ಲಿ ಸಹಜವಾಗಿದೆ. ಮೊದಲೆಲ್ಲಾ ಕೂಡು ಕುಟುಂಬಗಳಿದ್ದವು. ಗಂಡನಿಲ್ಲದಿದ್ದರೂ ಕುಟುಂಬದಲ್ಲಿರುವ ಹಲವು ಮಕ್ಕಳು ವಯಸ್ಸಾದವರು ಹೀಗೆ ಯಾರಾದರೂ ವಯಸ್ಸಾದ ಕಾಲಕ್ಕೆ ಆಧಾರವಾಗಿ ನಿಲ್ಲುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಕುಟುಂಬಗಳು ವಿಭಕ್ತಗೊಂಡಿದ್ದು, ಒಂಟಿಯಾಗಿ ಬದುಕುವುದು ಕಷ್ಟವೆನಿಸಿದೆ. ಇದೇ ಕಾರಣಕ್ಕೋ ಏನೋ ಇತ್ತೀಚೆಗೆ ಮರು ವಿವಾಹಗಳು ಸಹಜವೆನಿಸುತ್ತಿವೆ. ವಯಸ್ಸಾದ ಕಾಲಕ್ಕೆ ಸಮ ವಯಸ್ಕರ ಸಮ ಮನಸ್ಕರ ಆಸರೆಯೊಂದಿಗೆ ಬದುಕುವುದು ತಪ್ಪು ಅಲ್ಲ ಎನ್ನುವ ತಿಳುವಳಿಕೆಯನ್ನು ಯುವ ಸಮೂಹ ಹೊಂದಿದೆ. ಒಂಟಿಯಾಗಿರುವ ತಮ್ಮ ತಂದೆ ಅಥವಾ ತಾಯಿಗೆ ವಿವಾಹ ಮಾಡಲು ಅವರೂ ಕೂಡ ಮುಂದಾಗುತ್ತಿದ್ದಾರೆ.