ನವದೆಹಲಿ(ಫೆ.13): ‘ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವ ದಲಿತರು ಪರಿಶಿಷ್ಟಜಾತಿ ಕಾಯ್ದೆಯಡಿ ಮೀಸಲು ವ್ಯಾಪ್ತಿಗೆ ಬರುವುದಿಲ್ಲ. ಇಂಥವರು ಪರಿಶಿಷ್ಟಜಾತಿಯ ಮೀಸಲಿನ ಅಡಿ ರಾಜ್ಯ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹಾಗೂ ಇತರ ಮೀಸಲು ಸವಲತ್ತುಗಳನ್ನು ಪಡೆಯಲು ಅರ್ಹರಲ್ಲ’ ಎಂದು ರಾಜ್ಯಸಭೆಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ರಾಜ್ಯಸಭೆ ಕಲಾಪದಲ್ಲಿ ಬಿಜೆಪಿ ಸಂಸದ ಜಿ.ವಿ.ಎಲ್‌.ನರಸಿಂಹರಾವ್‌ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು, ‘ಸಂವಿಧಾನದ 3ನೇ ಪ್ಯಾರಾ (ಪರಿಶಿಷ್ಟಜಾತಿ) ಪ್ರಕಾರ, ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರವಾದ ದಲಿತರು ಪರಿಶಿಷ್ಟಜಾತಿ ಕಾಯ್ದೆಯಡಿ ಮೀಸಲಾತಿಗೆ ಅರ್ಹರಲ್ಲ. ಆದರೆ ಹಿಂದು, ಸಿಖ್‌ ಮತ್ತು ಬೌದ್ಧ ಧರ್ಮ ಪಾಲನೆ ಮಾಡುವ ದಲಿತರು ಮೀಸಲಾತಿಯ ಎಲ್ಲಾ ಸೌಲಭ್ಯಗಳಿಗೆ ಅರ್ಹರಾಗಿದ್ದು, ಅವರು ಪರಿಶಿಷ್ಟಜಾತಿಯ ಮೀಸಲು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದು ಹಾಗೂ ಇತರ ಮೀಸಲು ಸೌಲಭ್ಯಗಳನ್ನು ಪಡೆಯಬಹುದು’ ಎಂದಿದ್ದಾರೆ.

ಆದಾಗ್ಯೂ, ‘ಕ್ರೈಸ್ತ ಮತ್ತು ಇಸ್ಲಾಂಗೆ ಮತಾಂತರಗೊಂಡ ಪರಿಶಿಷ್ಟಜಾತಿ ಮತ್ತು ಪಂಗಡದವರು ಎಸ್‌ಸಿ ಮೀಸಲಾತಿಯಡಿ ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯುವ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡುವ ಯಾವುದೇ ಉದ್ದೇಶ ಸರ್ಕಾರದ ಮುಂದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.