ನವದೆಹಲಿ(ಏ.05): ದೇಶದಲ್ಲಿ ಕೊರೋನಾ ವೈರಸ್‌ನ ಎರಡನೇ ಅಲೆ ಕಾಣಿಸಿಕೊಂಡಿದೆ ಎಂಬ ವರದಿಗಳ ಬೆನ್ನಲ್ಲೇ, ಈ ಅಲೆ ಮೊದಲ ಸುತ್ತಿನ ಕೋವಿಡ್‌ಗಿಂತ ತೀವ್ರವಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಕೇವಲ ಹತ್ತು ದಿನಗಳ ಅವಧಿಯಲ್ಲಿ ಸಾವಿನ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳವಾಗಿದ್ದರೆ, ಇದೇ ಅವಧಿಯಲ್ಲಿ ದೈನಂದಿನ ಸೋಂಕಿತರ ಸಂಖ್ಯೆ 34 ಸಾವಿರದಷ್ಟುಏರಿಕೆಯಾಗಿದೆ. ಏಪ್ರಿಲ್‌ 15ರ ವೇಳೆಗೆ ಕೊರೋನಾ 2ನೇ ಅಲೆ ತುತ್ತತುದಿಗೆ ಹೋಗಬಹುದು ಎನ್ನಲಾಗುತ್ತಿದೆ. ಈ ಸಂದರ್ಭದಲ್ಲೇ ಸೋಂಕು, ಸಾವು ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕಳೆದ ವರ್ಷ ಸೆ.16ರಂದು ದೇಶದಲ್ಲಿ ಒಂದೇ ದಿನ 97894 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಸೆ.18ರಂದು 1247 ಮಂದಿ ಬಲಿಯಾಗಿದ್ದರು. ಇವೆರಡೂ ದೇಶದಲ್ಲಿ ಒಂದು ದಿನದಲ್ಲಿ ದಾಖಲಾಗದ ಗರಿಷ್ಠ ಸೋಂಕು, ಸಾವಿನ ಸಂಖ್ಯೆಯಾಗಿದೆ. ಎರಡನೇ ಅಲೆ ಈ ದಾಖಲೆಯನ್ನು ಕೆಲವೇ ದಿನಗಳಲ್ಲಿ ಧೂಳೀಪಟ ಮಾಡುವ ಸಾಧ್ಯತೆ ಕಂಡುಬರುತ್ತಿದೆ.

ಕಳೆದ ಮಾ.1ರಂದು 12286 ಪ್ರಕರಣಗಳು ವರದಿಯಾಗಿ, 91 ಮಂದಿ ಸಾವಿಗೀಡಾಗಿದ್ದರು. ಆದರೆ ಕೇವಲ ಒಂದೇ ತಿಂಗಳ ಅವಧಿಯಲ್ಲಿ 93 ಸಾವಿರ ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿದ್ದರೆ, 700ಕ್ಕೂ ಅಧಿಕ ಮಂದಿ ಸಾವಿಗೀಡಾಗುತ್ತಿದ್ದಾರೆ. ಇದರರ್ಥ ದೈನಂದಿನ ಸೋಂಕಿತರ ಸಂಖ್ಯೆಯಲ್ಲಿ 7.5 ಪಟ್ಟು ಹೆಚ್ಚಳವಾಗಿದ್ದರೆ, ಸಾವಿನ ಸಂಖ್ಯೆ 7.8 ಅಧಿಕವಾಗಿದೆ.

ಹತ್ತು ದಿನಗಳ ಹಿಂದೆ ಅಂದರೆ ಮಾ.26ರಂದು ದೇಶದಲ್ಲಿ 59,000 ಪ್ರಕರಣ ಪತ್ತೆಯಾಗಿ, 257 ಮಂದಿ ಬಲಿಯಾಗಿದ್ದರು. ಆದರೆ ಈಗ ದೈನಂದಿನ ಸೋಂಕಿತರ ಸಂಖ್ಯೆ 93 ಸಾವಿರಕ್ಕೇರಿದೆ. ಭಾನುವಾರ ಸುಮಾರು 500 ಸಾವು ಸಂಭವಿಸಿದ್ದರೆ, ಶನಿವಾರ 714 ಮಂದಿ ಸಾವಿಗೀಡಾಗಿದ್ದರು. ದೈನಂದಿನ ಸೋಂಕಿನ ಸಂಖ್ಯೆ ಪ್ರತಿದಿನ ಆರೇಳು ಸಾವಿರದಷ್ಟುಏರಿಕೆಯಾಗುತ್ತಿದೆ. ಇದೇ ವೇಗ ಮುಂದುವರಿದರೆ ದೈನಂದಿನ ಕೊರೋನಾ ದಾಖಲೆ ಸೋಮವಾರ ಅಥವಾ ಮಂಗಳವಾರ ಧೂಳೀಪಟವಾಗುವ ಸಾಧ್ಯತೆ ಇದೆ.

97894: 202ರ ಸೆ.16ರಂದು ದಾಖಲಾದ 97,894 ಕೇಸ್‌ಗಳು ಈವರೆಗಿನ ದೈನಂದಿನ ಗರಿಷ್ಠ ದಾಖಲೆಯಾಗಿದೆ.

1247: 2020ರ ಸೆ.18ರಂದು 1247 ಮಂದಿ ಬಲಿಯಾಗಿದ್ದು, ಇದು ಈವರೆಗಿನ ದೈನಂದಿನ ಗರಿಷ್ಠ ಸಂಖ್ಯೆಯಾಗಿದೆ.

8635: 2021ರ ಫೆ.1ರಂದು ದಾಖಲಾದ 8635 ಮಂದಿಗೆ ಹಬ್ಬಿದ ಕೇಸ್‌ಗಳು ಈವರೆಗಿನ ದೈನಂದಿನ ಕನಿಷ್ಠ ಸಂಖ್ಯೆ

91: 2021 ಫೆ.1ಕ್ಕೆ 91 ಮಂದಿಯನ್ನು ಕೊರೋನಾ ಸೋಂಕು ಬಲಿ ಪಡೆದಿತ್ತು. ಇದು 2020ರ ಏ.3ರ ನಂತರ ಕನಿಷ್ಠ ಸಾವು

Close