*  ಗಂಜಾಂನಲ್ಲಿ 15 ಸೆಂ.ಮೀ, ನಯಗಢದಲ್ಲಿ 10 ಸೆಂ.ಮೀ ಮಳೆ* ಜವಾದ್‌ ಚಂಡಮಾರುತ: ಒಡಿಶಾ, ಬಂಗಾಳದಲ್ಲಿ ಭಾರೀ ವರ್ಷಧಾರೆ* ಒಡಿಶಾ, ಬಂಗಾಳದಲ್ಲಿ ಸಮುದ್ರ ಭಾಗಕ್ಕೆ ತೆರಳದಂತೆ ಸೂಚನೆ

ಭುವನೇಶ್ವರ(ಡಿ.06): ಜವಾದ್‌ ಚಂಡಮಾರುತ ತೀವ್ರತೆ ಕಳೆದುಕೊಂಡು ವಾಯುಭಾರ ಕುಸಿತವಾಗಿ ಬದಲಾಗಿದ್ದರೂ, ಪರಿಣಾಮ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದೆ. ಭಾನುವಾರ ಬೆಳಗ್ಗೆ ಮಾಹಿತಿ ನೀಡಿದ ಭಾರತೀಯ ಹವಾಮಾನ ಇಲಾಖೆ, ಕಳೆದ 6 ಗಂಟೆಗಳಿಂದ ಪ್ರತೀ ಗಂಟೆಗೆ 20 ಕಿ.ಮೀ ವೇಗವಾಗಿ ಬೀಸುತ್ತಿರುವ ಜವಾದ್‌, ಗೋಪಾಲ್‌ಪುರದಿಂದ 90 ಕಿ.ಮೀ ವೇಗವಾಗಿ ಮತ್ತು ಪುರಿಯಿಂದ 120 ಕಿ.ಮೀ ಹಾಗೂ ಪರದೀಪ್‌ನಿಂದ 210 ಕಿ.ಮೀ ವೇಗವಾಗಿ ಚಲಿಸಲಿದೆ. ಹೀಗಾಗಿ ರಾಜ್ಯಾದ್ಯಂತ ಭಾನುವಾರ ಪೂರ್ತಿ ಮಳೆಯಾಗಿದೆ ಎಂದಿದೆ.

ಇನ್ನು ಗಂಜಾಂ ಜಿಲ್ಲೆಯಲ್ಲಿ 15 ಸೆಂ.ಮೀ, ನಯಗಢದಲ್ಲಿ 10 ಸೆಂ.ಮೀ., ಛತ್ರಪುರದಲ್ಲಿ 8 ಸೆಂ.ಮೀ., ಭುವನೇಶ್ವರದಲ್ಲಿ 42.3 ಮಿ.ಮೀ ಮಳೆಯಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಪ್ರವಾಸಿಗರು ಸೇರಿ ಎಲ್ಲರನ್ನೂ ಸಮುದ್ರ ಭಾಗದಿಂದ ತೆರವುಗೊಳಿಸಲಾಗಿದೆ.

ಬಂಗಾಳದಲ್ಲಿ ಉತ್ತರ ಪರಗಣಸ್‌ ಜಿಲ್ಲೆಯಿಂದ ಹೂಗ್ಲಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ದೋಣಿಯಾನವನ್ನು ರದ್ದುಪಡಿಸಲಾಗಿದೆ.

ಕ್ಷೀಣಿಸಿದ ಜವಾದ್‌ ಚಂಡಮಾರುತ

ಒಡಿಶಾ ಹಾಗೂ ಆಂಧ್ರಪ್ರದೇಶ ಕರಾವಳಿಯಲ್ಲಿ ಭೀತಿ ಸೃಷ್ಟಿಸಿದ್ದ ಜವಾದ್‌ ಚಂಡಮಾರುತ ದುರ್ಬಲಗೊಂಡಿದೆ. ಇದು ‘ವಾಯುಭಾರ ಕುಸಿತ’ವಾಗಿ ಕ್ಷೀಣಿಸಿದ್ದು, ಈಗಾಗಲೇ ‘ಗುಲಾಬ್‌’ ಹಾಗೂ ‘ಯಾಸ್‌’ ಚಂಡಮಾರುತದಿಂದ ತತ್ತರಿಸಿದ್ದ ಉಭಯ ರಾಜ್ಯಗಳ ಕರಾವಳಿ ಜನರಿಗೆ ನಿರಾಳತೆ ಉಂಟು ಮಾಡಿದೆ.

ಭಾನುವಾರ ಚಂಡಮಾರುತದ ಸ್ವರೂಪ ತಾಳಿ ಒಡಿಶಾದ ಪುರಿ ಕಡಲತೀರಕ್ಕೆ ‘ಜವಾದ್‌’ ಅಪ್ಪಳಿಸಬೇಕಿತ್ತು. ಗಂಟೆಗೆ 110 ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಇದು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಚಂಡಮಾರುತದ ಪರಿಣಾಮ ಒಟ್ಟು 7 ರಾಜ್ಯಗಳಲ್ಲಿ ಸಾಮಾನ್ಯದಿಂದ ಭಾರೀ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಒಡಿಶಾ, ಆಂಧ್ರ, ಬಂಗಾಳದ ಕರಾವಳಿಯಿಂದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರವುಗೊಳಿಸಲಾಗಿತ್ತು.

‘ಆದರೆ ಶನಿವಾರ ಇದರ ತೀವ್ರತೆ ಕ್ಷೀಣಿಸಿದೆ. ಭಾನುವಾರ ಮಧ್ಯಾಹ್ನ ಪುರಿ ಕಡಲತೀರಕ್ಕೆ ಇದು ಸಮೀಪಿಸಿದಾಗ ‘ವಾಯುಭಾರ ಕುಸಿತ’ವಾಗಿ ಮಾರ್ಪಡಲಿದೆ’ ಎಂದು ಇಲಾಖೆ ಶನಿವಾರ ಸ್ಪಷ್ಟಪಡಿಸಿದೆ.

64 ಎನ್‌ಡಿಆರ್‌ಎಫ್‌ ತಂಡ:

ಒಡಿಶಾ ಹಾಗೂ ಆಂಧ್ರದಲ್ಲಿನ ಚಂಡಮಾರುತದ ವೇಳೆ ರಕ್ಷಣಾ ಕೆಲಸಕ್ಕೆಂದು 64 ಎನ್‌ಡಿಆರ್‌ಎಫ್‌ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಶನಿವಾರದಿಂದ ಜಾರಿಗೆ ಬರುವಂತೆ ಮುಂದಿನ 3 ದಿನಗಳ ಅವಧಿಗೆ ಆಂಧ್ರ ಮತ್ತು ಒಡಿಶಾದಲ್ಲಿ ಸಂಚರಿಸುವ 90ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.