ಮುಜಪ್ಪರ್ಪುರ್[ಮಾ.18]: ಕೊರೋನಾ ಹರಡುವ ಭೀತಿಯಿಂದ ಇತ್ತೀಚೆಗೆ ಅಧಿಕ ಮಂದಿ ಮಾಸ್ಕ್ ಧರಿಸುತ್ತಿರುವ ದೃಶ್ಯ ಕಂಡು ಬರುತ್ತಿವೆ. ಮಾಸ್ಕ್ ಸದ್ಯ ಕೊರೋನಾದಿಂದ ರಕ್ಷಣೆ ಪಡೆಯುವುದರೊಂದಿಗೆ ಮುಖ ಮುಚ್ಚಿಕೊಳ್ಳುವ ಸಾಧನವೂ ಆಗಿದೆ. ಮುಖವನ್ನು ಮಾಸ್ಕ್ ನಿಂದ ಮುಚ್ಚಿಕೊಂಡ ಆರು ಮಂದಿ ದುಷ್ಕರ್ಮಿಗಳು ಆಯುಧಗಳನ್ನು ತೋರಿಸಿ SBI ಬ್ಯಾಂಕ್ ಶಾಖೆಯಿಂದ ಲಕ್ಷಾಂತರ ರೂಪಾಯಿ ದರೋಡೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 

ಹೌದು ಮುಜಫ್ಫರ್ ಪುರದ ಲಾಲೂ ಛಪ್ರಾ ಬಾಜಾರ್ ನಲ್ಲಿರುವ SBI ಬ್ಯಾಂಕ್ ಶಾಖೆಯಲ್ಲಿ ಈ ದರೋಡೆ ನಡೆದಿದೆ. ಕೇವಲ 6 ನಿಮಿಷದೊಳಗೆ 6 ಮಂದಿ ದುರ್ಷರ್ಮಿಗಳು 2 ಲಕ್ಷದ 53 ಸಾವಿರ ರೂ. ದೋಚಿದ್ದಾರೆ. 

ಎರಡು ಬೈಕ್ ಗಳಲ್ಲಿ ಬಂದಿದ್ದ ಆರು ದರೋಡೆಕೋರರು ಹಣ ಲಪಟಾಯಿಸಿದ ಬಳಿಕ ಮನಿಕ್ಪುರ್ ಹೆದ್ದಾರಿ ಮೂಲಕ ಸರೈಯ್ಯಾದೆಡೆ ಪರಾರಿಯಾಗಿದ್ದಾರೆ. ಮೂವರು ಅಪರಾಧಿಗಳು ಬ್ಯಾಂಕ್ ಒಳಗೆ ಪ್ರವೇಶಿಸಿದ್ದರೆ, ಇನ್ನು ಮೂವರು ಹೊರಗೇ ನಿಂತು ಪರಿಶೀಲಿಸುತ್ತಿದ್ದರು. ಬ್ಯಾಂಕ್ ಪ್ರವೇಶಿಸಿದ್ದ ದರೋಡೆಕೋರರು ಆರಂಭದಲ್ಲಿ ಗೇಟ್ ಬಳಿ ನಿಂತಿದ್ದ ವಾಚ್ ಮ್ಯಾನ್ ನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಇಬ್ಬರು ಅಪರಾಧಿಗಳು ಕ್ಯಾಶ್ ಕೌಂಟರ್ ಬಳಿ ತೆರಳಿ, ಕ್ಯಾಶಿಯರ್ ಗೆ ಪಿಸ್ತೂಲ್ ತೋರಿಸಿ ಹಣ ದರೋಡೆ ಮಾಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳಲ್ಲಿ ಎಲ್ಲರೂ ತಮ್ಮ ಮುಖವನ್ನು ಮಾಸ್ಕ್ ನಿಂದ ಮುಚ್ಚಿಕೊಂಡಿರುವುದು ಸ್ಪಷ್ಟವಾಗಿದೆ.

ವೈಶಾಲಿ ಗ್ಯಾಂಗ್ ಮೇಲೆ ಪೊಲೀಸರಿಗೆ ಅನುಮಾನ

ಈ ಕುರಿತು ಮಾಹಿತಿ ನೀಡಿರುವ ಬ್ಯಾಂಕ್ ಗಾರ್ಡ್ ದುಷ್ಕರ್ಮಿಗಳು ಅಚಾನಕ್ಕಾಗಿ ಬ್ಯಾಂಕ್ ಒಳಗೆ ಪ್ರವೇಶಿಸಿದರು ಹಾಗೂ ಅವರಲ್ಲೊಬ್ಬ ನನ್ನ ತಲೆಗೆ ಪಿಸ್ತೂಲ್ ಇಟ್ಟಿದ್ದ. ಹತ್ತಿರದಲ್ಲೇ ಒಬ್ಬ ಯುವಕ ಕುಳಿತಿದ್ದ, ಆತನ ಕೈಯ್ಯಲ್ಲಿದ್ದ ಮೊಬೈಲ್ ಅವರು ಕಸಿದುಕೊಂಡಿದ್ದರು. ಆದರೆ ಹೊರ ಹೋಗುವ ವೇಳೆ ಅದನ್ನವರು ಹಿಂತಿರುಗಿಸಿದ್ದಾರೆ. ಇನ್ನು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದ್ದು, ಇಲ್ಲಿನ ವೈಶಾಲಿ ಗ್ಯಾಂಗ್ ಈ ದರೋಡೆ ನಡೆಸಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.