ನವದೆಹಲಿ(ಅ.14): ವಿಶ್ವವನ್ನೇ ಹೈರಾಣಾಗಿಸಿರುವ ಕೊರೋನಾ ವೈರಸ್‌ ನಿಗ್ರಹಕ್ಕೆ 2021ರ ಆರಂಭದಿಂದ ಭಾರತದಲ್ಲಿ ಲಸಿಕೆ ದೊರೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ

ಹರ್ಷವರ್ಧನ್‌ ಅವರು ಘೋಷಣೆ ಮಾಡಿದ್ದಾರೆ. ದೇಶಾದ್ಯಂತ ಈ ಲಸಿಕೆಯನ್ನು ಯಾವ ರೀತಿ ವಿತರಣೆ ಮಾಡಬೇಕು ಎಂಬ ಯೋಜನೆ ರೂಪಿಸುವ ಕಾರ್ಯದಲ್ಲಿ ತಜ್ಞರು ಮಗ್ನರಾಗಿದ್ದಾರೆ ಎಂದೂ ಹೇಳಿದ್ದಾರೆ.

ಸಚಿವರ ಸಮೂಹದ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷಾರಂಭದಲ್ಲಿ ದೇಶದಲ್ಲಿ ಲಸಿಕೆ ದೊರೆಯಲಿದೆ. ಒಂದಕ್ಕಿಂತ ಹೆಚ್ಚು ಕಡೆಯಿಂದ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿದರು. ಬಳಿಕ ಇದೇ ವಿಷಯದ ಕುರಿತು ಟ್ವೀಟ್‌ ಮಾಡಿರುವ ಹರ್ಷವರ್ಧನ್‌ ಜುಲೈ ವೇಳೆಗೆ ದೇಶದ 20-25 ಕೋಟಿ ಜನರಿಗೆ 40-50 ಕೋಟಿ ಡೋಸ್‌ಗಳಷ್ಟುಲಸಿಕೆ ಲಭ್ಯವಾಗಬಹುದು ಎಂದು ಹೇಳಿದ್ದಾರೆ. ಪ್ರಸಕ್ತ ವಿಶ್ವದಾದ್ಯಂತ ಅಭಿವೃದ್ಧಿ ಹಂತದಲ್ಲಿರುವ ಲಸಿಕೆಗಳ ಪೈಕಿ ಒಂದನ್ನು ಹೊರತಪಡಿಸಿ ಉಳಿದೆಲ್ಲಾ ಲಸಿಕೆಗಳನ್ನು ರೋಗಿಗಳಿಗೆ 2 ಡೋಸ್‌ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು 25 ಕೋಟಿ ಜನರಿಗೆ 50 ಕೋಟಿ ಡೋಸ್‌ ಲಸಿಕೆಯ ಮಾತುಗಳನ್ನು ಆಡಿದ್ದಾರೆ.

ಸದ್ಯ ಭಾರತದಲ್ಲಿ ಮೂರು ಲಸಿಕೆಗಳು ಪ್ರಯೋಗ ಹಂತದಲ್ಲಿವೆ. ಆ ಪೈಕಿ ಯಾವ ಲಸಿಕೆ ಜನರಿಗೆ ಲಭ್ಯವಾಗಲಿದೆ ಎಂಬ ಬಗ್ಗೆ ಸಚಿವರು ಮಾಹಿತಿ ನೀಡಿಲ್ಲ. ಇದಲ್ಲದೆ ರಷ್ಯಾದ ‘ಸ್ಪುಟ್ನಿಕ್‌’ ಲಸಿಕೆಯ ಪ್ರಯೋಗವನ್ನು ನಡೆಸಲು ಭಾರತ ಮುಂದೆ ಬಂದಿದೆ.

ಈ ಮಧ್ಯೆ ವಿಶ್ವದಲ್ಲಿ 40 ಲಸಿಕೆಗಳು ಕ್ಲಿನಿಕಲ್‌ ಟ್ರಯಲ್‌ ಹಂತದಲ್ಲಿದ್ದು, ಆ ಪೈಕಿ 10 ಲಸಿಕೆಗಳು ಮೂರನೇ ಹಾಗೂ ಕಡೆಯ ಹಂತದ ಪರೀಕ್ಷೆಯಲ್ಲಿವೆ. ಈ ಹಂತದಲ್ಲಿ ಅವುಗಳ ಕ್ಷಮತೆ ಹಾಗೂ ಸುರಕ್ಷತೆ ತಿಳಿಯಲಿದೆ. 2020ರ ಅಂತ್ಯ ಅಥವಾ 2021ರ ಆರಂಭದಲ್ಲಿ ಒಂದು ಲಸಿಕೆಯಾದರೂ ನೋಂದಣಿ ಘಟ್ಟಕ್ಕೆ ಬರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್‌ ಅವರು ಕೂಡ ತಿಳಿಸಿದ್ದಾರೆ.