ನವ​ದೆ​ಹ​ಲಿ(ಮಾ.08): ಮಹಾ​ಮಾರಿ ಕೊರೋನಾ ವೈರಸ್‌ ಅಟ್ಟ​ಹಾ​ಸದ ಕೊನೇ ಹಂತ​ದಲ್ಲಿ ನಾವಿ​ದ್ದೇವೆ. ಕೊರೋನಾ ವಿರು​ದ್ಧದ ಈ ಹೋರಾ​ಟ​ದಲ್ಲಿ ನಾವು ಜಯ​ಶೀ​ಲ​ರಾ​ಗ​ಲಿ​ದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿ​ವ ಡಾ. ಹರ್ಷ​ವ​ರ್ಧನ್‌ ಹೇಳಿ​ದ್ದಾರೆ.

ದೆಹ​ಲಿ​ಯಲ್ಲಿ ಭಾನು​ವಾರ ನಡೆದ 62ನೇ ದೆಹ​ಲಿ ರಾಜ್ಯ ವೈದ್ಯ​ಕೀಯ ಕಾನ್ಫ​ರೆ​ನ್ಸ್‌ ಉದ್ದೇ​ಶಿಸಿ ಮಾತ​ನಾ​ಡಿ​ದ ಡಾ. ವ​ರ್ಧನ್‌ ಅವರು, ‘ಕೊರೋನಾ ವಿರು​ದ್ಧದ ನಮ್ಮ ಈ ಹೋರಾಟ ಯಶ​ಸ್ವಿ​ಯಾ​ಗ​ಬೇ​ಕಾ​ದರೆ ಲಸಿಕೆ ಅಭಿ​ಯಾ​ನ​ದಲ್ಲಿ ರಾಜ​ಕೀಯ ಬೆರೆ​ಸ​ಬಾ​ರದು. ಲಸಿ​ಕೆ ಅಭಿ​ವೃ​ದ್ಧಿಯ ಹಿಂದಿನ ವಿಜ್ಞಾ​ನದ ಶ್ರಮ​ದ ಮೇಲೆ ಭರ​ವ​ಸೆ​ಯಿ​ಡ​ಬೇಕು ಹಾಗೂ ಕೊನೆ​ಯ​ದಾಗಿ ನಮ್ಮ ಸುತ್ತ​ಮು​ತ್ತ​ಲಿ​ರು​ವ​ವ​ರಿಗೆ ಅವರ ಸರದಿ ಬಂದಾಗ ಲಸಿಕೆ ಪಡೆ​ಯಬೇಕೆಂಬ ಮಂತ್ರ​ಗ​ಳನ್ನು ಪಾಲಿ​ಸ​ಬೇ​ಕು’ ಎಂದು ಹೇಳಿ​ದರು.

ಇಡೀ ವಿಶ್ವವೇ ಕೊರೋ​ನಾ​ದಿಂದ ಮುಕ್ತ​ವಾ​ಗದ ಹೊರತು ಭಾರತ ದೇಶ ಈ ಸೋಂಕಿ​ನಿಂದ ಮುಕ್ತ​ವಾ​ಗ​ಲಾರದು. ಬಡ ಮತ್ತು ಅಭಿ​ವೃ​ದ್ಧಿ​ಶೀಲ ರಾಷ್ಟ್ರ​ಗ​ಳಲ್ಲಿ ಸೋಂಕಿನ ತೀವ್ರತೆ ಮುಂದು​ವ​ರಿ​ದ್ದಲ್ಲಿ, ಆ ಸೋಂಕು ನಮ್ಮ ದೇಶಕ್ಕೂ ವ್ಯಾಪಿ​ಸ​ಲಿದೆ. ಹೀಗಾಗಿ ಪ್ರತಿ​ಯೊ​ಬ್ಬ​ರಿಗೂ ಲಸಿಕೆ ಪೂರೈ​ಕೆ​ಯಾ​ಗ​ಬೇ​ಕಿದೆ ಎಂದು ಅಭಿ​ಪ್ರಾ​ಯ​ಪ​ಟ್ಟಿ​ದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯ​ಕ​ತ್ವ​ದ​ಲ್ಲಿ 62 ರಾಷ್ಟ್ರ​ಗ​ಳಿಗೆ 5.51 ಕೋಟಿ ಲಸಿ​ಕೆ​ಯ ಡೋಸ್‌​ಗ​ಳನ್ನು ಪೂರೈ​ಸಿದ ಭಾರ​ತವು ವಿಶ್ವದ ಔಷ​ಧಾ​ಲ​ಯ​ವಾಗಿ ಮಾರ್ಪ​ಟ್ಟಿತು ಎಂದು ಪ್ರತಿ​ಪಾ​ದಿ​ಸಿ​ದರು.