ಕೊರೋನಾ ಲಸಿಕೆ: ಗುಡ್ ನ್ಯೂಸ್ ಕೊಟ್ಟ ಸೆರಂ ಸಂಸ್ಥೆ!
ಡಿಸೆಂಬರ್‌ಗೆ ಲಸಿಕೆ ರೆಡಿ, ಮಾರ್ಚಲ್ಲಿ ಮಾರುಕಟ್ಟೆಗೆ| ಮೊದಲಿಗೆ 6ರಿಂದ 7 ಕೋಟಿ ಲಸಿಕೆ ಲಭ್ಯ| ಪುಣೆಯ ಸೀರಂ ಸಂಸ್ಥೆ ನಿರ್ದೇಶಕ ಹೇಳಿಕೆ
ನವದೆಹಲಿ(ಅ.19): ಕೊರೋನಾ ವೈರಸ್‌ಗೆ ಲಸಿಕೆ ಯಾವಾಗ ಲಭ್ಯವಾಗಲಿದೆ ಎಂದು ಎಲ್ಲರೂ ಕಾತರಿಸುತ್ತಿರುವಾಗಲೇ ಶುಭ ಸುದ್ದಿಯೊಂದು ಹೊರಬಿದ್ದಿದೆ. ಡಿಸೆಂಬರ್ ವೇಳೆಗೆ ಭಾರತಕ್ಕೆ ಕೊರೋನಾಕ್ಕೆ ಲಸಿಕೆ ಲಭ್ಯವಾಗಲಿದೆ ಪುಣೆ ಮೂಲದ ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನಾ ಕಂಪನಿಯಾದ ಸೀರಂ ಇನ್ಸ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಸುರೇಶ್ ಜಾಧವ್ ಹೇಳಿದ್ದಾರೆ.
ಚಳಿಗಾಲದಲ್ಲಿ ಕೊರೋನಾ 2ನೇ ಅಲೆ ಏಳುವ ಆತಂಕ!
ಲಸಿಕೆ ಉತ್ಪಾದನೆ ಕುರಿತ ಕಾರ್ಯಾಗಾರವೊಂದರಲ್ಲಿ ಮಾತನಾಡಿದ ಸುರೇಶ್ ಜಾಧವ್, ‘ಲಸಿಕೆ ಉತ್ಪಾದನೆಗೆ ಅಗತ್ಯವಾದ ಅನುಮತಿ ನೀಡುವಲ್ಲಿನ ವೇಗ ಮತ್ತು ಹಲವು ಸಂಸ್ಥೆಗಳು ಲಸಿಕೆ ಉತ್ಪಾದನೆಯಲ್ಲಿ ತೊಡಗಿರುವ ಕಾರಣ ಮುಂಬರುವ ಡಿಸೆಂಬರ್ ವೇಳೆಗೆ ಭಾರತಕ್ಕೆ 6-7 ಕೋಟಿಯಷ್ಟುಲಸಿಕೆ ಲಭ್ಯವಾಗಲಿದೆ. ಆದರೆ ಲೈಸೆನ್ಸ್ ಮತ್ತಿತರೆ ಪ್ರಕ್ರಿಯೆ ಪೂರ್ಣಗೊಂಡು ಅವರು ಮಾಚ್‌ರ್ ವೇಳೆ ಜನರ ಬಳಕೆಗೆ ಲಭ್ಯವಾಗಬಹುದು’ ಎಂದು ತಿಳಿಸಿದ್ದಾರೆ.
ದೇಶದಲ್ಲಿ ವೈರಸ್ ಗರಿಷ್ಠಕ್ಕೇರಿ ಇಳಿಯುತ್ತಿದೆ, ನಿಯಮ ಪಾಲಿಸಿದರೆ ಫೆಬ್ರವರಿಗೆ ನಿಯಂತ್ರಣ!
ಸದ್ಯ ಮೂರು ಲಸಿಕೆಗಳನ್ನು ಭಾರತದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಅವುಗಳ ಪೈಕಿ 2 ಲಸಿಕೆಗಳು 2ನೇ ಹಂತದ ಹಾಗೂ 1 ಲಸಿಕೆ 3ನೇ ಹಂತದ ಪರೀಕ್ಷೆಗೆ ಒಳಪಟ್ಟಿದೆ. ರಷ್ಯಾದ ಸ್ಪುಟ್ನಿಕ್ 5 ಲಸಿಕೆಯನ್ನು ಭಾರತದಲ್ಲೂ ಪ್ರಯೋಗಕ್ಕೆ ಒಳಪಡಿಸಲು ಶನಿವಾರವಷ್ಟೇ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು.