ನವದೆಹಲಿ(ಮೇ.19): ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಹೆಸರಿಗೆ ಕೊರೋನಾ ಕಳಂಕ ಮೆತ್ತಲು ಕಾಂಗ್ರೆಸ್‌ ಪಕ್ಷ ‘ಟೂಲ್‌ಕಿಟ್‌’ವೊಂದನ್ನು ಬಿಡುಗಡೆ ಮಾಡಿದ್ದು, ಹೊಸ ಮಾದರಿಯ ಕೊರೋನಾ ವೈರಸ್‌ ಅನ್ನು ‘ಭಾರತೀಯ ತಳಿ’ ಅಥವಾ ‘ಮೋದಿ ತಳಿ’ ಎಂದು ಕರೆಯುವಂತೆ ಸೂಚನೆ ನೀಡಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌, ನಕಲಿ ಟೂಲ್‌ಕಿಟ್‌ವೊಂದನ್ನು ಬಿಜೆಪಿ ಪಸರಿಸುತ್ತಿದೆ. ತನ್ಮೂಲಕ ಕೊರೋನಾ ನಿರ್ವಹಣಾ ವೈಫಲ್ಯವನ್ನು ಕಾಂಗ್ರೆಸ್‌ ಸಂಶೋಧನಾ ವಿಭಾಗದ ತಲೆಗೆ ಕಟ್ಟಲು ಯತ್ನಿಸುತ್ತಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಸಂಬಿತ್‌ ಪಾತ್ರಾ ವಿರುದ್ಧ ಈ ಕುರಿತು ಫೋರ್ಜರಿ ದೂರು ದಾಖಲಿಸುತ್ತೇವೆ ಎಂದು ಕಿಡಿಕಾರಿದೆ.

"

ಟೂಲ್‌ಕಿಟ್‌ ಜಟಾಪಟಿ:

ಕೊರೋನಾ ಸಮಯದಲ್ಲಿ ತಾನು ಸಹಾಯ ಮಾಡುತ್ತಿರುವುದಾಗಿ ಪತ್ರಕರ್ತರಿಂದ ಕಾಂಗ್ರೆಸ್‌ ಪ್ರಚಾರ ಪಡೆಯುತ್ತಿದೆ. ಹೊಸ ಕೊರೋನಾ ವೈರಸ್ಸನ್ನು ಮೋದಿ ತಳಿ, ಭಾರತ ತಳಿ ಎಂದು ಕರೆಯುವಂತೆ ಸಾಮಾಜಿಕ ಜಾಲತಾಣ ಸ್ವಯಂಸೇವಕರಿಗೆ ಸೂಚನೆ ನೀಡಿದೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಸೇರಿದಂತೆ ಹಲವು ಬಿಜೆಪಿ ನಾಯಕರು ಟ್ವೀಟ್‌ ಮಾಡಿ ದೂರಿದ್ದಾರೆ.

‘ಇತರರ ವಿರುದ್ಧ ಕಾಂಗ್ರೆಸ್‌ ವಿಷ ಕಾರುತ್ತಿದೆ. ಇದರಲ್ಲಿ ಅದು ಸಿದ್ಧಹಸ್ತ. ಟೂಲ್‌ ಕಿಟ್‌ ಮಾದರಿಯಿಂದಾಚೆಗೂ ಕಾಂಗ್ರೆಸ್‌ ರಚನಾತ್ಮಕ ಕೆಲಸ ಮಾಡಬೇಕು’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹರಿಹಾಯ್ದಿದ್ದಾರೆ. ಕಾಂಗ್ರೆಸ್‌ ಇಷ್ಟೊಂದು ಕನಿಷ್ಠ ಮಟ್ಟಕ್ಕೆ ಇಳಿಯುತ್ತೆಂದು ಯೋಚಿಸಿರಲಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ.

"

ಆದರೆ ಇದಕ್ಕೆ ಎಐಸಿಸಿ ಸಂಶೋಧನಾ ವಿಭಾಗದ ಮುಖ್ಯಸ್ಥ, ಕನ್ನಡಿಗ ರಾಜೀವ್‌ ಗೌಡ ತಿರುಗೇಟು ನೀಡಿದ್ದಾರೆ. ಕೋವಿಡ್‌ನಿಂದ ಭಾರತ ತತ್ತರಿಸುತ್ತಿರುವಾಗ ಪರಿಹಾರ ನೀಡುವುದು ಬಿಟ್ಟು, ನಾಚಿಕೆಯಿಲ್ಲದೆ ಫೋರ್ಜರಿಯನ್ನು ಬಿಜೆಪಿ ಮಾಡಿದೆ. ಈ ಬಗ್ಗೆ ದೂರು ನೀಡುತ್ತೇವೆ ಎನ್ನುವ ಮೂಲಕ ಕಾಂಗ್ರೆಸ್‌ ಪಕ್ಷ ಯಾವುದೇ ಟೂಲ್‌ ಕಿಟ್‌ ಸೃಷ್ಟಿಸಿಲ್ಲ, ಅದನ್ನು ಬಿಜೆಪಿಯೇ ಕಾಂಗ್ರೆಸ್‌ ಹೆಸರಲ್ಲಿ ಮಾಡಿದೆ ಎಂದು ಕಿಡಿಕಾರಿದ್ದಾರೆ.

ಟೂಲ್‌ಕಿಟ್‌ನಲ್ಲಿ ಏನಿದೆ?

1. ಹೊಸ ಕೊರೋನಾ ವೈರಸ್‌ ಅನ್ನು ಮೋದಿ ತಳಿ ಎಂದು ಕರೆಯಿರಿ.

2. ಭಾರತ ಮತ್ತು ಮೋದಿ ವಿರುದ್ಧ ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಬಳಸಿಕೊಳ್ಳಿ.

3. ಮೋದಿ ಮತ್ತು ಗುಜರಾತ್‌ ಇಮೇಜ್‌ ಹಾಳುಮಾಡಿ.

4. ಸಾವು ಮತ್ತು ಶವಸಂಸ್ಕಾರದ ಚಿತ್ರಗಳನ್ನು ಸಿನಿಮೀಯವಾಗಿ ಬಳಕೆ ಮಾಡಿ.

5. ಪಿಎಂ ಕೇರ್ಸ್‌ ನಿಧಿ ಟೀಕಿಸಲು ಬುದ್ಧಿಜೀವಿಗಳನ್ನು ಬಳಸಿಕೊಳ್ಳಿ.

6. ಸೆಂಟ್ರಲ್‌ ವಿಸ್ತಾವನ್ನು ಮೋದಿ ಮನೆ ಎಂದು ಬಿಂಬಿಸಿ.

7. ಕುಂಭಮೇಳವನ್ನು ಕೊರೋನಾ ಸೂಪರ್‌ ಸೆ್ೊ್ರಡರ್‌ ಎಂದು, ಈದ್‌ ಅನ್ನು ಶುಭ ಸಾಮಾಜಿಕ ಸೇರುವಿಕೆ ಎಂದು ಸುದ್ದಿ ಹಬ್ಬಿಸಿ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona