ಕೋವಿಡ್‌ ನಿಯಂತ್ರಣ: ಕರ್ನಾಟಕಕ್ಕೆ ಕೇಂದ್ರ ತಂಡ| ಒಟ್ಟು 10 ರಾಜ್ಯಗಳಿಗೆ ತಂಡ ಕಳಿಸಲು ಕೇಂದ್ರ ನಿರ್ಧಾರ| ಸೋಂಕು ಹೆಚ್ಚಳ ಏಕೆ ಎಂದು ಕಂಡುಹಿಡಯುವ ತಂಡ| ಸೋಂಕು ನಿಯಂತ್ರಣಕ್ಕೂ ಸಲಹೆ ನೀಡುವ ತಜ್ಞರು

ನವದೆಹಲಿ(ಫೆ.25): ದೇಶದ ಹಲವು ರಾಜ್ಯಗಳಲ್ಲಿ ಮತ್ತೆ ಹೊಸ ಕೊರೋನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ, ಸೋಂಕು ನಿಯಂತ್ರಣದ ಮೇಲುಸ್ತುವಾರಿಗಾಗಿ ಕರ್ನಾಟಕ ಸೇರಿ 10 ರಾಜ್ಯಗಳಿಗೆ ಕೇಂದ್ರ ಸರ್ಕಾರ ತಜ್ಞರ ತಂಡಗಳನ್ನು ನಿಯೋಜಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ನೇತೃತ್ವದ ಪ್ರತಿ ತಂಡದಲ್ಲಿ ಮೂವರು ಸದಸ್ಯರು ಇರಲಿದ್ದಾರೆ.

ಸದ್ಯ ದೇಶದಲ್ಲಿ ಅತಿಹೆಚ್ಚಿನ ಸೋಂಕು ಕಂಡುಬರುತ್ತಿರುವ ಮಹಾರಾಷ್ಟ್ರ, ಕೇರಳ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್‌, ಕರ್ನಾಟಕ, ಪಂಜಾಬ್‌, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ತಜ್ಞರ ತಂಡ ನಿಯೋಜಿಸಲಾಗಿದೆ.

ಈ ತಜ್ಞರ ತಂಡವು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತದೊಂದಿಗೆ ನಿಕಟ ಸಂಪರ್ಕದ ಮೂಲದ ಸೋಂಕು ಹೆಚ್ಚಳಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡುವ ಕೆಲಸ ಮಾಡಲಿದೆ. ಜೊತೆಗೆ ಅಲ್ಲದೆ ಸೋಂಕಿನ ಸರಪಳಿ ತುಂಡರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳ ಕುರಿತೂ ಕಾರ್ಯನಿರ್ವಹಿಸಲಿದೆ.

ಇದೇ ವೇಳೆ ಸೋಂಕು ನಿಯಂತ್ರಣಾ ಕ್ರಮ ಜಾರಿಯಲ್ಲಿ ಯಾವುದೇ ವೈಫಲ್ಯ ತೋರಬಾರದು. ಅದರಲ್ಲೂ ವಿಶೇಷವಾಗಿ ಕೆಲ ರಾಜ್ಯಗಳಲ್ಲಿ ರೂಪಾಂತರಿ ಕೊರೋನಾದ ಹೊಸ ತಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮುತುವರ್ಜಿ ತೋರಬೇಕು. ಜೊತೆಗೆ ಕೇಂದ್ರದಿಂದ ಆಗಮಿಸಿರುವ ತಜ್ಞರ ತಂಡದ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಸಮಾಲೋಚನೆಗೆ ಸೂಕ್ತ ಕಾಲಾವಕಾಶ ಕಲ್ಪಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಪತ್ರ ಬರೆದಿದೆ.