ಚೆನ್ನೈ(ಮಾ.22): ಭಾರತಕ್ಕೆ ವಿದೇಶದಿಂದ ಬಂದವರು ಮತ್ತು ಅವರ ಸಂಪರ್ಕಕ್ಕೆ ಬಂದವರಲ್ಲಿ ಮಾತ್ರ ಕಾಣಿಸುತ್ತಿದ್ದ ಕೊರೋನಾ ಸೋಂಕು, ಇದೇ ಮೊದಲ ಬಾರಿಗೆ ಸಾಮುದಾಯಿಕ ಹರಡುವಿಕೆಯ ಭೀತಿ ಹುಟ್ಟುಹಾಕಿದೆ. ಕಾರಣ, ಈ ಎರಡೂ ಅಂಶಗಳಿಲ್ಲದ ಹೊರತಾಗಿಯೂ ಚೆನ್ನೈ ಮತ್ತು ಪುಣೆಯಲ್ಲಿ ತಲಾ ಒಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಬುಧವಾರ ದೆಹಲಿಯಿಂದ ತಮಿಳುನಾಡಿಗೆ ಆಗಮಿಸಿದ್ದ 20 ವರ್ಷದ ದಿಲ್ಲಿ ಯುವಕನೊಬ್ಬನಿಗೆ ಕೊರೋನಾ ವೈರಸ್‌ ದೃಢಪಟ್ಟಿದೆ. ದಿಲ್ಲಿಯಿಂದ ಚೆನ್ನೈಗೆ ರೈಲಿನಲ್ಲಿ ಈತ ಆಗಮಿಸಿದ್ದ. ಆದರೆ ಈ ಮುನ್ನ ಈತ ಕೊರೋನಾ ಹರಡುವಿಕೆಯ ಮೂಲವಾಗಿರುವ ಯಾವುದೇ ವಿದೇಶಕ್ಕೆ ಹೋದವನಲ್ಲ ಅಥವಾ ಕೊರೋನಾ ವೈರಸ್‌ ದೃಢಪಟ್ಟಯಾವುದೇ ವ್ಯಕ್ತಿಯ ಜತೆ ಸಂಪರ್ಕಕ್ಕೆ ಬಂದವನಲ್ಲ. ಹಾಗಿದ್ದರೂ ಈತನಿಗೆ ಕೊರೋನಾ ಹೇಗೆ ಅಂಟಿತು? ಅದರ ಮೂಲ ಯಾವುದು ಎಂಬುದು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಹುಶಃ ರೈಲಲ್ಲಿ ಪ್ರಯಾಣಿಸುವಾಗ ಅಥವಾ ಇನ್ನಾವುದೋ ಸ್ಥಳದಲ್ಲಿ ಕೊರೋನಾ ಅಂಟಿದ ವ್ಯಕ್ತಿಗಳು ಈತನ ಅರಿವಿಗೆ ಬಾರದಂತೆ ಸಂಪರ್ಕಕ್ಕೆ ಬಂದಿರಬಹುದು. ಅವರಿಂದ ಈತನಿಗೂ ಕೊರೋನಾ ಅಂಟಿರಬಹುದು. ಹಾಗಿದ್ದರೆ ಅಂಥ ಕೊರೋನಾ ಸೋಂಕಿತರು ಇನ್ನೂ ಎಷ್ಟುಜನರಿಗೆ ರೋಗ ಅಂಟಿಸಿರಬುಹುದು ಎಂಬುದು ಕಳವಳಕ್ಕೆ ಕಾರಣವಾಗುವ ಅಂಶ.

ಇನ್ನು ಪುಣೆಯಲ್ಲಿ 40 ವರ್ಷದ ಮಹಿಳೆಯೊಬ್ಬರು ಹಂದಿಜ್ವರದ ಶಂಕೆಯ ಮೇಲೆ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಅವರಿಗೂ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಮಹಿಳೆಯ ಕೂಡಾ ವಿದೇಶಕ್ಕೆ ಹೋದ ಹಿನ್ನೆಲೆಯಾಗಲೀ, ಸೋಂಕು ಬಂದವರ ಸಂಪರ್ಕಕ್ಕಾಗಲೀ ಬಂದಿರಲಿಲ್ಲ. ಸದ್ಯ ಮಹಿಳೆ ಆರೋಗ್ಯ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಕೊರೋನಾ ಸಾಮುದಾಯಿಕವಾಗಿ ವ್ಯಾಪಿಸುವ ಬಗ್ಗೆ ಯಾವುದೇ ಸಾಕ್ಷ್ಯವಿಲ್ಲ ಎಂದು ಒಂದೆಡೆ ಕೇಂದ್ರ ಆರೋಗ್ಯ ಸಚಿವಾಲಯ ಹೇಳುತ್ತಿದೆ. ಆದಾಗ್ಯೂ ಈತನಿಗೆ ಹೇಗೆ ಕೊರೋನಾ ಅಂಟಿತು ಎಂಬ ಬಗ್ಗೆ ಗಹನ ಅವಲೋಕನ ಆರಂಭಿಸಲಾಗಿದೆ.

ವಿದೇಶದಿಂದ ಬಂದವರಿಗೆ ತಾಗಿದ್ದು ಕೊರೋನಾದ ಮೊದಲ ಹಂತವಾದರೆ, ಆ ರೀತಿ ಬಂದವರಿಂದ ದೇಶದಲ್ಲಿನ ವ್ಯಕ್ತಿಗಳಿಗೆ ಹರಡುವುದು ಎರಡನೇ ಹಂತ. ಆದರೆ ವಿದೇಶದಿಂದ ಬಂದವರಿಂದ ಸೋಂಕಿತರಾಗಿರುವ ವ್ಯಕ್ತಿಗಳಿಂದ 3ನೇ ವ್ಯಕ್ತಿಗೆ ರೋಗ ಅಂಟಿತು ಎಂದರೆ ಅದು ತೃತೀಯ ಹಂತವಾಗಿದ್ದು, ಇದು ಸಾಮುದಾಯಿಕ ಹರಡುವಿಕೆಗೆ ಕಾರಣ ಆಗಬಹುದು ಎಂಬುದು ಸರ್ಕಾರದ ಆತಂಕ. ಈ ಕಾರಣಕ್ಕೇ 2ನೇ ಹಂತದಲ್ಲೇ ಕೊರೋನಾ ಹೊಸಕಿ ಹಾಕಬೇಕು ಎಂದು ಸರ್ಕಾರ ಶ್ರಮಿಸುತ್ತಿದೆ.