ನವದೆಹಲಿ[ಫೆ.23]: ಕೊರೋನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರು , ತೀರಾ ಅಗತ್ಯವಿಲ್ಲದ ಹೊರತಾಗಿ ಸಿಂಗಾಪುರಕ್ಕೆ ಭೇಟಿ ನೀಡುವುದು ಬೇಡ ಎಂಬ ಸಲಹೆಯನ್ನು ಕೇಂದ್ರ ಸರ್ಕಾರ ನೀಡಿದೆ.

ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ಶನಿವಾರ ನಡೆದ ಪರಿಶೀಲನಾ ಸಭೆಯ ಬಳಿಕ ಈ ಮುನ್ನೆಚ್ಚರಿಕೆ ಹೊರಡಿಸಲಾಗಿದೆ. ಇದೇ ವೇಳೆ ಕೊರೋನಾಕ್ಕೆ ತತ್ತರಿಸಿರುವ ಚೀನಾದ ಸುತ್ತಮುತ್ತಲಿರುವ ರಾಷ್ಟ್ರಗಳನಾದ ಇಂಡೋನೇಷ್ಯಾ, ವಿಯೆಟ್ನಾಂ, ಮಲೇಷ್ಯಾದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೂ ಭಾರತ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆಗೊಳಪಡಿಸಲು ನಿರ್ಧರಿಸಲಾಗಿದ್ದು, ಈ ಕ್ರಮ ಸೋಮವಾರದಿಂದ ಜಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಪ್ರಸ್ತುತ ಚೀನಾ, ಹಾಂಕಾಂಗ್‌, ಥಾಯ್ಲೆಂಡ್‌, ದಕ್ಷಿಣ ಕೊರಿಯಾ, ಸಿಂಗಾಪುರ ಹಾಗೂ ಜಪಾನ್‌ನಿಂದ ಭಾರತಕ್ಕೆ ಆಗಮಿಸುತ್ತಿರುವ ಪ್ರಯಾಣಿಕರನ್ನು ದೇಶದ 21 ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಇದುವರೆಗೂ 21,805 ಪ್ರಯಾಣಿಕರ ಮೇಲೆ ಸಮುದಾಯ ನಿಗಾ ವಹಿಸಲಾಗಿದೆ. ಅಲ್ಲದೆ, 3,97,152 ಮಂದಿ ವಿಮಾನ ಪ್ರಯಾಣಿಕರು ಹಾಗೂ ಸಮುದ್ರ ಮಾರ್ಗದ ಮೂಲಕ ಭಾರತ ಪ್ರವೇಶಿಸಿದ ಸುಮಾರು 10 ಸಾವಿರ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.