ಪಾಟ್ನಾ [ಜ.03]: ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿದ್ದರೂ, ದೊಡ್ಡಣ್ಣನಂತೆ ವರ್ತಿಸುತ್ತಾ ಲೋಕಸಭೆ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮುಖಭಂಗಕ್ಕೆ ಒಳಗಾಗಿದ್ದ ಕಾಂಗ್ರೆಸ್‌, ಕೊನೆಗೂ ಗೆಲುವಿನ ಹಾದಿ ಕಂಡುಕೊಳ್ಳಲು ದೊಡ್ಡಣ್ಣನ ಪಟ್ಟಬಿಡಲು ನಿರ್ಧರಿಸಿದೆ. ಇತ್ತೀಚೆಗೆ ಮುಕ್ತಾಯವಾದ ಜಾರ್ಖಂಡ್‌ ವಿಧಾನಸಭಾ ಚುನಾವಣೆಯಲ್ಲಿ ಪ್ರಯೋಗಿಸಿದ ಈ ತಂತ್ರ ಫಲಿಸಿದ ಹಿನ್ನೆಲೆಯಲ್ಲಿ, ಮುಂಬರುವ ಬಿಹಾರ ಚುನಾವಣೆಗೂ ಇದೇ ತಂತ್ರ ಬಳಸಲು ನಿರ್ಧರಿಸಿದೆ.

ಅಂದರೆ ಪ್ರಾದೇಶಿಕ ಪಕ್ಷಗಳು ಹೆಚ್ಚು ಪ್ರಬಲವಾಗಿರುವ ರಾಜ್ಯಗಳಲ್ಲಿ, ಅಲ್ಲಿನ ಸ್ಥಳೀಯ ಪಕ್ಷಗಳಿಗೇ ನಾಯಕನ ಪಟ್ಟನೀಡಿ, ಮೈತ್ರಿಕೂಟದಲ್ಲಿ ತಾನು ಕಿರಿಯ ಪಾಲುದಾರನಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ನಿರ್ಧರಿಸಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಜಾರ್ಖಂಡ್‌ ಫಲ:

ಜಾರ್ಖಂಡ್‌ ಚುನಾವಣೆಯಲ್ಲಿ ಜೆಎಂಎಂ ಜತೆ ಮೈತ್ರಿ ಮಾಡಿಕೊಂಡು ಜಯಭೇರಿ ಬಾರಿಸಿದ್ದು ಕಾಂಗ್ರೆಸ್‌ಗೆ ಹೊಸ ಸ್ಫೂರ್ತಿ ತಂದುಕೊಟ್ಟಿದೆ. ಹೀಗಾಗಿ ಇದೇ ತಂತ್ರವನ್ನು ಪಕ್ಕದ ರಾಜ್ಯ ಬಿಹಾರದಲ್ಲೂ ಹೆಣೆದು ಜೆಡಿಯು-ಬಿಜೆಪಿ ಮೈತ್ರಿಕೂಟಕ್ಕೆ ಸೋಲುಣಿಸುವ ತಂತ್ರವನ್ನು ಕಾಂಗ್ರೆಸ್‌ ಹೆಣೆಯಲು ತೀರ್ಮಾನಿಸಿದೆ ಎನ್ನಲಾಗಿದೆ.

ವೇದಿಕೆಯಲ್ಲೇ 50 ಸಾವಿರ ಕೋಟಿ ಕೇಳಿದ ಬಿಎಸ್‌ವೈಗೆ ಮೋದಿಯಿಂದ ಸಿಕ್ಕ ಉತ್ತರ!...

ಜಾರ್ಖಂಡ್‌ನಲ್ಲಿ ಜೆಎಂಎಂ ದೊಡ್ಡ ಪಕ್ಷವಾಗಿದ್ದು, ಕಾಂಗ್ರೆಸ್‌ ಪಕ್ಷ ‘ಕಿರಿಯ ಮಿತ್ರಪಕ್ಷ’ದಂತೆ ಕಾರ್ಯನಿರ್ವಹಿಸಿತು. 81 ಸ್ಥಾನಬಲದ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜೆಎಂಎಂಗೆ 43 ಸ್ಥಾನ ಬಿಟ್ಟುಕೊಟ್ಟಿದ್ದ ಕಾಂಗ್ರೆಸ್‌ ತಾನು 31 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿತು. ಆರ್‌ಜೆಡಿಗೆ 7 ಸ್ಥಾನ ನೀಡಿತ್ತು. ಈ ಮೈತ್ರಿ ಭರ್ಜರಿ ರೀತಿಯಲ್ಲಿ ಫಲಕೊಟ್ಟು ಮೈತ್ರಿಕೂಟ 47 ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿತ್ತು.

ಹೀಗಾಗಿ ಇದೇ ವರ್ಷದ ಅಕ್ಟೋಬರ್‌ನಲ್ಲಿ ನಡೆಬೇಕಿರುವ ಬಿಹಾರ ಚುನಾವಣೆಯಲ್ಲೂ ಇದೇ ತಂತ್ರಕ್ಕೆ ಶರಣಾಗಲು ಕಾಂಗ್ರೆಸ್‌ ನಿರ್ಧರಿಸಿದೆ ಎನ್ನಲಾಗಿದೆ. ಆರ್‌ಜೆಡಿಯನ್ನೇ ಕೂಟದ ದೊಡ್ಡ ಪಕ್ಷ ಎಂದು ಬಿಂಬಿಸಿ ಲಾಲು ಪುತ್ರ ತೇಜಸ್ವಿ ಯಾದವ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವುದು ಹಾಗೂ ತಾನು ‘ಕಿರಿಯ ಮಿತ್ರಪಕ್ಷ’ದಂತೆ ಕೆಲಸ ಮಾಡುವುದು ಕಾಂಗ್ರೆಸ್‌ನ ಇರಾದೆ ಎನ್ನಲಾಗಿದೆ.

ಬಿಹಾರದಲ್ಲಿ ಲಾಲು ಪ್ರಸಾದ್‌ ಯಾದವ್‌ರ ಆರ್‌ಜೆಡಿ ದೊಡ್ಡ ಮಿತ್ರಪಕ್ಷವಾಗಿದೆ. ಆರ್‌ಜೆಡಿ ಜತೆಗೆ ಕಾಂಗ್ರೆಸ್‌, ಜೀತನ್‌ರಾಂ ಮಾಂಝಿ ಅವರ ‘ಹಮ್‌’ ಪಕ್ಷ, ಉಪೇಂದ್ರ ಕುಶ್ವಾಹಾರ ಆರ್‌ಎಲ್‌ಎಸ್‌ಪಿ, ವಿಕಾಸಶೀಲ ಇನ್ಸಾನ್‌ ಪಾರ್ಟಿ ಹಾಗೂ ಸಿಪಿಐ (ಎಂಎಲ್‌) ಪಕ್ಷಗಳೂ ಮೈತ್ರಿ ಮಾಡಿಕೊಂಡಿವೆ. ಕಳೆದ ಲೋಕಸಭೆ ಚುನಾವಣೆಯಲ್ಲೂ ಇದೇ ಕೂಟ ಸ್ಪರ್ಧೆ ಮಾಡಿತ್ತು.