ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕೃಷಿ ಕಾಯ್ದೆ ರದ್ದು: ಪ್ರಿಯಾಂಕಾ!
ರೈತಾಪಿ ವರ್ಗಕ್ಕೆ ಸಂಕಷ್ಟಕ್ಕೆ ಸಿಲುಕಿಸಲಿರುವ ಕೇಂದ್ರದ 3 ಕೃಷಿ ಕಾಯ್ದೆ ರದ್ದು| ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕೃಷಿ ಕಾಯ್ದೆ ರದ್ದು: ಪ್ರಿಯಾಂಕಾ
ಲಖನೌ(ಫೆ.11): ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದೇ ಆದಲ್ಲಿ ರೈತಾಪಿ ವರ್ಗಕ್ಕೆ ಸಂಕಷ್ಟಕ್ಕೆ ಸಿಲುಕಿಸಲಿರುವ ಕೇಂದ್ರದ 3 ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಘೋಷಿಸಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧ ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ಪಕ್ಷ ಆಯೋಜಿಸಿದ್ದ ರೈತ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಬಿಜೆಪಿ ನಾಯಕರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಅವಮಾನಿಸುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ರಾಕ್ಷಸಿ ಸ್ವರೂಪಿಯಾದ ಈ ಕಾಯ್ದೆಗಳನ್ನು ಮುಂದುವರಿಸಲ್ಲ’ ಎಂದರು.
ಅಲ್ಲದೆ, ‘ಕಾಯ್ದೆಗಳಿಂದಾಗಿ ಎಪಿಎಂಸಿ ವ್ಯವಸ್ಥೆ ಕ್ರಮೇಣ ಪತನಗೊಳ್ಳಲಿದೆ. ಕಾಯ್ದೆಗಳು ರದ್ದಾಗುವತನಕ ಹೋರಾಟ ಮುಂದುವರಿಸಲಿದ್ದೇವೆ’ ಎಂದು ಘೋಷಿಸಿದರು.