ಶಿವಸಾಗರ (ಫೆ.15): ಅಸ್ಸಾಂನಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಯಾವುದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತರುವುದಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಘೋಷಿಸಿದ್ದಾರೆ.

ಸಿಎಎ ಮೂಲಕ ಅಸ್ಸಾಂನಲ್ಲಿ ಪಕ್ಕದ ಬಾಂಗ್ಲಾದೇಶದಿಂದ ಬಂದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಉದ್ದೇಶವಿದೆ. ಈ ಹಿನ್ನೆಲೆಯಲ್ಲಿ ರಾಹುಲ್‌ರ ಈ ಹೇಳಿಕೆ ಮಹತ್ವ ಪಡೆದಿದೆ.

ಭಾನುವಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಸ್ಸಾಂನಲ್ಲಿ ಚುನಾವಣಾ ರಾರ‍ಯಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌, ‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅಸ್ಸಾಂ ಅನ್ನು ವಿಭಜಿಸುವ ಕೆಲಸ ಮಾಡುತ್ತಿವೆ. ಹಾಗಾಗಿ ರಾಜ್ಯಕ್ಕೆ ತನ್ನ ಜನರ ಮಾತನ್ನು ಆಲಿಸುವ ಮುಖ್ಯಮಂತ್ರಿಯ ಅಗತ್ಯವಿದೆ. ನಾಗ್ಪುರ, ದೆಹಲಿಯ ಮಾತನ್ನು ಆಲಿಸುವ ನಾಯಕ ಅಲ್ಲ’ ಎಂದು ತಿರುಗೇಟು ನೀಡಿದರು.

ಇದೇ ವೇಳೆ, ‘ಅಸ್ಸಾಂ ಒಪ್ಪಂದವು ಶಾಂತಿ ಮತ್ತು ದೇಶದ ರಕ್ಷಣೆಗಾಗಿ ಇರುವ ಒಪ್ಪಂದ. ಕಾಂಗ್ರೆಸ್‌ ಪಕ್ಷ ಈ ಒಪ್ಪಂದದ ಪ್ರತಿ ತತ್ವವನ್ನೂ ರಕ್ಷಿಸಲಿದೆ. ಅಕ್ರಮ ವಲಸೆ ಅಸ್ಸಾಂಗೆ ದೊಡ್ಡ ಸಮಸ್ಯೆಯೇ. ಆದರೆ ರಾಜ್ಯದ ಜನರು ಮಾತುಕತೆ ಮೂಲಕವೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಮರ್ಥರಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

ರಾರ‍ಯಲಿ ವೇಳೆ ರಾಹುಲ್‌ ಗಾಂಧಿ ಅಸ್ಸಾಂನ ಸಾಂಪ್ರದಾಯಿಕ ‘ಗಮೋಚಾ’ (ಸ್ಕಾಫ್‌ರ್‍) ಧರಿಸಿದ್ದು ವಿಶೇಷವಾಗಿತ್ತು.