* ಡಿಸೆಂಬರ್‌ನಲ್ಲಿ ಗುಜರಾತ್ ಚುನಾವಣೆ* ಕಾಂಗ್ರೆಸ್ ಚಿಂತನ ಶಿಬಿರದ ನಿರ್ಣಯ ಗುಜರಾತಲ್ಲಿ ಜಾರಿ* ಇಲ್ಲಿ ಮೊದಲ ಬಾರಿ ಶಿಬಿರದ ನಿರ್ಣಯ ಪ್ರಯೋಗ
ಅಹಮದಾಬಾದ್(ಮೇ.17): ಕಾಂಗ್ರೆಸ್ ಪಕ್ಷ ರಾಜಸ್ಥಾನದಲ್ಲಿ ನಡೆದ ‘ಚಿಂತನ ಶಿಬಿರ’ದಲ್ಲಿ ಕೈಗೊಂಡ ನಿರ್ಣಯಗಳು ಇದೇ ವರ್ಷಾಂತ್ಯಕ್ಕೆ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ಜಾರಿಗೆ ಬರಲಿವೆ. ಈ ಮೂಲಕ ಚಿಂತನ ಶಿಬಿರದ ಚಿಂತನೆಗಳು ಕಾರ‍್ಯರೂಪಕ್ಕೆ ಬರಲಿರುವ ಮೊದಲ ರಾಜ್ಯ ಗುಜರಾತ್ ಎನ್ನಿಸಿಕೊಳ್ಳಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಶಿಬಿರದಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್, 50 ವರ್ಷದ ಕೆಳಗಿನ ವ್ಯಕ್ತಿಗಳಿಗೆ ಶೇ.50ರಷ್ಟುಟಿಕೆಟ್- ಮುಂತಾದ ಮಹತ್ವದ ನಿರ್ಣಯ ಕೈಗೊಳ್ಳಲಾಗಿತ್ತು.
ಈ ಬಗ್ಗೆ ಮಾತನಾಡಿದ ಗುಜರಾತ್ ಕಾಂಗ್ರೆಸ್ ವಕ್ತಾರ ಮನೀಶ್ ದೋಶಿ, ‘ಚಿಂತನ ಶಿಬಿರದಲ್ಲಿ ಪಕ್ಷವು ಹೊರರಾಜ್ಯದ ಒಬ್ಬ ನಾಯಕನನ್ನು ಪ್ರತಿ ಲೋಕಸಭೆ ಕ್ಷೇತ್ರದ ಉಸ್ತುವಾರಿಯನ್ನಾಗಿ ಮಾಡಲು ನಿರ್ಣಯಿಸಿದೆ. ಚುನಾವಣೆ ವೇಳೆ ಈ ಉಸ್ತುವಾರಿಯು ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 5-6 ವಿಧಾನಸಭಾ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಅಲ್ಲದೆ, ಕಾಲ ಕಾಲಕ್ಕೆ ರಾಜ್ಯಕ್ಕೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಬರಲಿದ್ದು, ಪಕ್ಷದ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಲಿದ್ದಾರೆ. ಜೂನ್‌ನಲ್ಲಿ ಇಬ್ಬರೂ ನಾಯಕರು ಗುಜರಾತ್‌ಗೆ ಬರಲಿದ್ದಾರೆ’ ಎಂದರು.
ವಲಯವಾರು ಸಭೆಗಳನ್ನು ನಡೆಸಿ ಆಯಾ ವಲಯದ ನಾಯಕರಿಗೆ ಪಕ್ಷದ ಹೊಣೆ ಹಿರಿಸಲಾಗುತ್ತದೆ. ಇದೇ ಮಾಸಾಂತ್ಯಕ್ಕೆ ಸೌರಾಷ್ಟ್ರ, ದಕ್ಷಿಣ ಗುಜರಾತ್ ವಲಯ ಸಭೆಗಳು ನಡೆಯಲಿದೆ ಎಂದರು.
