ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್‌ 17 ರಂದು ಚುನಾವಣೆ ನಡೆಯಲಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ಶಶಿ ತರೂರ್‌ ಹಾಗೂ ಜಾರ್ಖಂಡ್‌ನ ಕೆಎನ್‌ ತ್ರಿಪಾಠಿ ಸದ್ಯ ಕಣದಲ್ಲಿದ್ದಾರೆ. ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಮಲ್ಲಿಕಾರ್ಜುನ್‌ ಖರ್ಗೆ ಈಗಾಗಲೇ ಪ್ರಚಾರದ ವೇಳಾಪಟ್ಟಿಯನ್ನೂ ಸಿದ್ಧ ಮಾಡಿದ್ದಾರೆ. 

ನವದೆಹಲಿ (ಅ.8): ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಚುನಾವಣೆಯ ಕಣ ರಂಗೇರಿದೆ. ಮಲ್ಲಿಕಾರ್ಜುನ ಖರ್ಗೆ, ಶಶಿ ತರೂರ್‌ ಹಾಗೂ ಕೆಎನ್‌ ತ್ರಿಪಾಠಿ ಕಣದಲ್ಲಿದ್ದು, ಇಂದು ನಾಮಪತ್ರವನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಹಾಗೇನಾದರೂ, ನಾಮಪತ್ರನ್ನು ಯಾರೂ ಹಿಂಪಡೆಯದೇ ಇದ್ದಲ್ಲಿ, ಅಕ್ಟೋಬರ್‌ 17 ರಂದು ಮೂರು ಅಭ್ಯರ್ಥಿಗಳ ನಡುವೆ ಚುನಾವಣೆ ನಡೆಯಲಿದೆ. ಈ ನಡುವೆ ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಪ್ರಚಾರ ವೇಳಾಪಟ್ಟಿಯನ್ನು ಆರಂಭ ಮಾಡಿದ್ದು, ಗುಜರಾತ್‌ನ ಅಹಮದಾಬಾದ್‌ನಿಂದ ಪ್ರಚಾರ ಆರಂಭ ಮಾಡಿದ್ದಾರೆ. ಅಧ್ಯಕ್ಷ ಚುನಾವಣೆಯ ವ್ಯವಹಾರಗಳಿಂದ ದೂರ ನಿಂತು, ಭಾರತ್‌ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಳ್ಳಾರಿಯಲ್ಲಿ ಚುನಾವಣೆಗೆ ಮತದಾನ ಮಾಡಲಿದ್ದಾರೆ ಎಂದು ವರದಿಯಾಗಿದೆ. ಕೆಎನ್‌ ತ್ರಿಪಾಠಿ ಕಣದಲ್ಲಿದ್ದರೂ, ತಿರುವನಂತಪುರ ಸಂಸದ ಶಶಿ ತರೂರ್‌ ಹಾಗೂ ಗಾಂಧಿ ಕುಟುಂಬದ ಆಪ್ತ ಮಲ್ಲಿಕಾರ್ಜುನ್‌ ಖರ್ಗೆ ನಡುವೆಯೇ ಪ್ರಮುಖ ಕದನ ನಡೆಯಲಿದೆ. ಅಧ್ಯಕ್ಷ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಶಶಿ ತರೂರ್‌, ಮಲ್ಲಿಕಾರ್ಜನ್‌ ಖರ್ಗೆ ಕಾಂಗ್ರೆಸ್‌ನ ಅಧ್ಯಕ್ಷರಾದಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಬದಲಾವಣೆಗಳು ಆಗಬೇಕಾದಲ್ಲಿ ತಮಗೆ ಮತ ಹಾಕಿ ಎಂದು ಹೇಳಿದ್ದಾರೆ.

ದಿನ ಕಳೆದಂತೆ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ (Congress President) ಚುನಾವಣೆ ಕಾವೇರುತ್ತಿದೆ. ಶಶಿ ತರೂರ್‌ ಈಗಾಗಲೇ ಚುನಾವಣೆ ಪ್ರಚಾರವನ್ನು ಆರಂಭ ಮಾಡಿದ್ದರೆ, ಮಲ್ಲಿಕಾರ್ಜುನ್‌ ಖರ್ಗೆ ಶನಿವಾರ ಅಹಮದಾಬಾದ್‌ನಿಂದ ಪ್ರಚಾರ ಆರಂಭ ಮಾಡಿದ್ದಾರೆ. ಗುರುವಾರ ರಾತ್ರಿ ಅವರು ಅಹಮದಾಬಾದ್‌ ವಿಮಾನನಿಲ್ದಾಣಕ್ಕೆ ಆಗಮಿಸಿದ್ದಾರೆ. ಶುಕ್ರವಾರ ಅವರು ಅಹಮದಾಬಾದ್‌ನ ಸಬರಮತಿ ಆಶ್ರಮ (Sabarmati Ashram) ಹಾಗೂ ಗುಜರಾತ್‌ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿದ್ದಾರೆ. ಶನಿವಾರ ಅಹಮದಾಬಾದ್‌ನಿಂದಲೇ ಪ್ರಚಾರವನ್ನು ಅಧಿಕೃತವಾಗಿ ಆರಂಭಿಸಿದ್ದಾರೆ.

ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳಕ್ಕೆ ಖೇಟಿ: ಅಹಮದಾಬಾದ್‌ನಲ್ಲಿ(Ahmedabad ) ಕಾಂಗ್ರೆಸ್‌ ಪದಾಧಿಕಾರಿಗಳನ್ನು (Congress Workers) ಭೆಟಿ ಮಾಡಿದ ಬಳಿಕ ಮಲ್ಲಿಕಾರ್ಜುನ ಖರ್ಗೆ ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ. ಶನಿವಾರವೇ ಅವರು ಹೈದರಾಬಾದ್‌ ಹಾಗೂ ವಿಜಯವಾಡಕ್ಕೆ ಭೇಟಿ ನೀಡಲಿದ್ದು, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಕಾಂಗ್ರೆಸ್‌ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ. ಭಾನುವಾರ ಅವರು ಜಮ್ಮು ಕಾಶ್ಮೀರ ಮತ್ತು ದೆಹಲಿಗೆ ಭೇಟಿ ನೀಡಲಿದ್ದಾರೆ. ಅದಾದ ಬಳಿಕ ಅವರು ಸೋಮವಾರ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂಗೆ ಭೇಟಿ ನೀಡಲಿದ್ದಾರೆ. ಮಂಗಳ ಬಿಹಾರ ಹಾಗೂ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಚುನಾವಣೆ, ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕಠಿಣ ಮಾರ್ಗಸೂಚಿ ಪ್ರಕಟ!

ಸಾಕಷ್ಟು ರಾಜ್ಯಗಳಿಗೆ ಭೇಟಿ ನೀಡಿರುವ ಶಶಿ ತರೂರ್‌: ಶಶಿ ತರೂರ್ (Shashi Taroor)ಅವರು ತಮ್ಮ ಪ್ರಚಾರ ಪ್ರವಾಸದ ಭಾಗವಾಗಿ ಈಗಾಗಲೇ ತಮ್ಮ ತವರು ರಾಜ್ಯ ಕೇರಳ, ಮಹಾರಾಷ್ಟ್ರ, ತೆಲಂಗಾಣ ಮತ್ತು ತಮಿಳುನಾಡಿಗೆ ಭೇಟಿ ನೀಡಿದ್ದಾರೆ. ಅಕ್ಟೋಬರ್‌ 17ಕ್ಕೆ ಚುನಾವಣೆ ನಡೆಯಲಿದ್ದರೆ, ಮತ ಎಣಿಕೆ ಪ್ರಕ್ರಿಯೆ ಅಕ್ಟೋಬರ್‌ 19 ರಂದು ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟಗೊಳ್ಳಲಿದೆ.

Bharat Jodo Yatra, ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ ನಡುವೆ ಸೋನಿಯಾ ಕೊಡಗಿನಲ್ಲಿ ವಿಶ್ರಾಂತಿ

ಬಳ್ಳಾರಿಯಲ್ಲಿ ರಾಹುಲ್‌ ಗಾಂಧಿ (Rahul Gandhi) ಮತದಾನ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅಕ್ಟೋಬರ್ 17 ರಂದು ಕರ್ನಾಟಕದ ಬಳ್ಳಾರಿಯಲ್ಲಿ ಮತದಾನ ಮಾಡಲಿದ್ದಾರೆ, ವಾಸ್ತವವಾಗಿ, ಬಳ್ಳಾರಿಯಲ್ಲಿ ಭಾರತ ಜೋಡೋ ಯಾತ್ರೆ ನಡೆಯಲಿದ್ದು, ಅಲ್ಲಿ ಚುನಾವಣೆಗೆ ವ್ಯವಸ್ಥೆ ಮಾಡಲಾಗುತ್ತದೆ. ಭಾರತ್ ಜೋಡೋ (Bharath Jodo) ಯಾತ್ರೆಯ ಸುಮಾರು 40 ಯಾತ್ರಿಕರು ರಾಹುಲ್ ಗಾಂಧಿ ಅವರೊಂದಿಗೆ ಮತ ಚಲಾಯಿಸಲಿದ್ದಾರೆ. ಭಾರತ್‌ ಜೋಡೋ ಯಾತ್ರೆ ಸದ್ಯ ಕರ್ನಾಟಕದಲ್ಲಿದ್ದು, ಶನಿವಾರದ ವೇಳೆಗೆ ತುಮಕೂರಿನಲ್ಲಿ ಯಾತ್ರೆ ಪ್ರಾರಂಭವಾಗಲಿದೆ.