* ಅನ್‌ಲೈನಲ್ಲಿ 2.6 ಕೋಟಿ, ಆಫ್‌ಲೈನಲ್ಲಿ 3 ಕೋಟಿ ಜನರ ನೋಂದಣಿ* 5.6 ಕೋಟಿ ಜನರಿಂದ ಕಾಂಗ್ರೆಸ್‌ ಸದಸ್ಯತ್ವ* ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಮುಕ್ತಾಯ

ನವದೆಹಲಿ(ಏ.16): ಸತತ ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಲು ಕಾಂಗ್ರೆಸ್‌ ಆರಂಭಿಸಿದ್ದ ನೂತನ ಸದಸ್ಯರ ಸೇರ್ಪಡೆ ಅಭಿಯಾನ ಗುರುವಾರ ಮುಕ್ತಾಯಗೊಂಡಿದೆ.

2021ರ ನ.1ರಿಂದ ಆರಂಭವಾಗಿದ್ದ ಸದಸ್ಯತ್ವ ನೋಂದಣಿ ಅಭಿಯಾನದಡಿ ಇದುವರೆಗೆ 2.6 ಕೋಟಿ ಜನರು ಆನ್‌ಲೈನ್‌ ಮೂಲಕ ಮತ್ತು 3 ಕೋಟಿ ಜನರು ಆಫ್‌ಲೈನ್‌ ಮೂಲಕ ಸದಸ್ಯತ್ವ ಪಡೆದುಕೊಂಡಿದ್ದಾರೆ. ನೋಂದಣಿ ಮಾಡಿಸಿಕೊಂಡ ಕೆಲವು ಜನರಲ್ಲಿ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಇರುವುದು ವಿಶೇಷ.

ಇದರೊಂದಿಗೆ, ಹಳೆಯ ಕಾರ್ಯಕರ್ತರೂ ಸೇರಿ ಒಟ್ಟಾರೆ ಪಕ್ಷದ ನೋಂದಾಯಿತ ಕಾರ್ಯಕರ್ತರ ಸಂಖ್ಯೆ 6 ಕೋಟಿ ದಾಟಿದೆ ಎನ್ನಲಾಗಿದೆ. ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್‌ ಸ್ವರೂಪದಲ್ಲಿ ಅಂದರೆ ವಿಶೇಷ ಆ್ಯಪ್‌ ಬಳಸಿ ಸದಸ್ವತ್ಯ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿತ್ತು. ಕರ್ನಾಟಕವೊಂದರಲ್ಲೇ 50 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ನೊಂದಾವಣೆ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು.

ಸದ್ಯ 18 ಕೋಟಿಗೂ ಹೆಚ್ಚು ನೊಂದಾಯಿತಿ ಕಾರ್ಯಕರ್ತರನ್ನು ಹೊಂದುವ ಮೂಲಕ ಭಾರತೀಯ ಜನತಾ ಪಕ್ಷ ವಿಶ್ವದಲ್ಲೇ ಅತಿದೊಡ್ಡ ಪಕ್ಷ ಎಂಬ ಹಿರಿಮೆ ಹೊಂದಿದೆ.