ಲಸಿಕೆ ಅಡ್ಡ ಪರಿಣಾಮ ಬೀರಿದರೆ ಪರಿಹಾರ: ಕೋವ್ಯಾಕ್ಸಿನ್‌| ಲಸಿಕೆ ನೀಡುವ ಮೊದಲು ಪಡೆವವರಿಂದ ಸಮ್ಮತಿ ಪತ್ರಕ್ಕೆ ಸಹಿ

ಹೈದ್ರಾಬಾದ್(ಜ.17)‌: ಲಸಿಕೆ ಪಡೆದವರಲ್ಲಿ ಯಾವುದೇ ಅಡ್ಡ ಪರಿಣಾಮ ಕಂಡುಬಂದಲ್ಲಿ ಅದಕ್ಕೆ ಸೂಕ್ತ ಪರಿಹಾರ ನೀಡುವುದಾಗಿ ಕೋವ್ಯಾಕ್ಸಿನ್‌ ತಯಾರಿಕಾ ಕಂಪನಿಯಾ ಹೈದ್ರಾಬಾದ್‌ ಮೂಲದ ಭಾರತ್‌ ಭಯೋಟೆಕ್‌ ಭರವಸೆ ನೀಡಿದೆ.

ಶನಿವಾರ ದೇಶಾದ್ಯಂತ ಲಕ್ಷಾಂತರ ಜನರಿಗೆ ಕೋವ್ಯಾಕ್ಸಿನ್‌ ಲಸಿಕೆ ನೀಡಲಾಗಿದ್ದು, ಲಸಿಕೆ ನೀಡುವ ಮುನ್ನ ಪ್ರತಿಯೊಬ್ಬರಿಂದಲೂ ಸಮ್ಮತಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ.

ಅದರಲ್ಲಿ ‘ಒಂದು ವೇಳೆ ಲಸಿಕೆ ಪಡೆದ ಬಳಿಕ ಯಾವುದೇ ಸಾಮಾನ್ಯ ಅಥವಾ ಗಂಭೀರ ಅಡ್ಡ ಪರಿಣಾಮಗಳು ಕಂಡುಬಂದಲ್ಲಿ ನಿಮಗೆ ವೈದ್ಯಕೀಯವಾಗಿ ಮಾನ್ಯತೆ ಪಡೆದ ಗುಣಮಟ್ಟದ ಚಿಕಿತ್ಸೆ ಕೊಡಿಸಲಾಗುವುದು. ಗಂಭೀರ ಪ್ರಕರಣಗಳಲ್ಲಿ ಸ್ವತಃ ಭಾರತ್‌ ಬಯೋಟೆಕ್‌ ಇಂಡಿಯಾ ಲಿ. ಪರಿಹಾರ ನೀಡಲಿದೆ’ ಎಂದು ಭರವಸೆ ನೀಡಲಾಗಿದೆ.

ಮೂರನೇ ಹಂತದ ಪರೀಕ್ಷೆ ಆರಂಭಕ್ಕೂ ದೇಶೀ ಲಸಿಕೆ ಕೋವ್ಯಾಕ್ಸಿನ್‌ಗೆ ಅನುಮತಿ ಕೊಟ್ಟಿದಕ್ಕೆ ಭಾರೀ ಆಕ್ಷೇಪಗಳು ವ್ಯಕ್ತವಾದ ಬೆನ್ನಲ್ಲೇ ಕೋವ್ಯಾಕ್ಸಿನ್‌ನಿಂದ ಇಂಥ ಭರವಸೆ ಹೊರಬಿದ್ದಿದೆ.