ಪ್ಯಾಂಟ್‌ನೊಳಗೆ ಹೊಕ್ಕ ನಾಗರ ಹಾವು: 7 ಗಂಟೆ ಕಂಬ ಹಿಡಿದು ನಿಂತು ಪ್ರಾಣ ಉಳಿಯಿತು!
ಪ್ಯಾಂಟ್ ಒಳಗೆ ಹೊಕ್ಕ ನಾಗರ ಹಾವು| ಹಾವು ಕಚ್ಚಬಾರದೆಂದು ಏಳು ಗಂಟೆ ನಿಂತುಕೊಂಡೇ ಇದ್ದ ಯುವಕ| ಹಾವಾಡಿಗ ಬಂದ ಬಳಿಕವಷ್ಟೇ ಕದಲಿದ ಯುವಕ
ಲಕ್ನೋ(ಜು.31): ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಯುವಕನೊಬ್ಬನ ಜೀನ್ಸ್ ಪ್ಯಾಂಟ್ ಒಳಗೆ ನಾಗರ ಹಾವು ಹೊಕ್ಕಿಕೊಂಡಿದೆ. ಭಯಬಿದ್ದ ಯುವಕ ರಾತ್ರಿಯಿಡೀ ಕಂಬವೊಂದನ್ನು ಹಿಡಿದು ಸಮಯ ಕಳೆದಿದ್ದಾನೆ. ಬೆಳಗಾಗುತ್ತಿದ್ದಂತೆಯೇ ಹಾವಾಡಿಗನ ಸಹಾಯದಿಂದ ಪ್ಯಾಂಟ್‌ನೊಳಗಿದ್ದ ಹಾವನ್ನು ಹೊರ ತೆಗೆಯಲಾಗಿದೆ. ಈ ವೇಎ ಪೊಲೀಸರು ಹಾಗೂ ಅಧಿಕಾರಿಗಳೊಂದಿಗೆ ಗ್ರಾಮಸ್ಥರೆಲ್ಲರೂ ಅಲ್ಲಿ ಜಮಾಯಿಸಿದ್ದರು.
ಈ ಘಟನೆ ಜಾಮಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಕಂದರ್‌ಪುರದಲ್ಲಿ ನಡೆದಿದೆ. ಇಲ್ಲಿ ವಿದ್ಯುತ್ ಇಲಾಖೆ ವತಿಯಿಂದ ಕಂಬ ಹಾಗೂ ತಂತಿ ಹಾಕುವ ಕೆಲಸ ನಡೆಯುತ್ತಿತ್ತು. ಕೆಲಸಕ್ಕಿದ್ದ ಕಾರ್ಮಿಕರು ಅದೇ ಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ರಾತ್ರಿ ವೇಳೆ ಉಳಿದುಕೊಂಡಿದ್ದರು. ಹೀಗಿರುವಾಗ ರಾತ್ರಿ ಎಲ್ಲರೂ ಊಟ ರೆಡಿ ಮಾಡಿ, ತಿಂದು ಮಲಗಿದ್ದರು.
ಮಲಗಿದ್ದಾಗ ಜೀನ್ಸ್ ಒಳಗೆ ಹೋದ ನಾಗಣ್ಣ
ಮಲಗಿದ್ದ ಲವ್ಲೇಶ್ ಕುಮಾರ್ ಎಂಬಾತನ ಶರ್ಟ್ ಮೂಲಕ ಒಳಗೆ ನುಗ್ಗಿದ ಹಾವು ಆತನ ಪ್ಯಾಂಟ್‌ನೊಳಗೆ ಪ್ರವೇಶಿಸಿದೆ. ಹಾವೊಂದು ಪ್ಯಾಂಟ್‌ನೊಳಗೆ ನುfಗಗಿದೆ ಎಂದು ಅರಿತ ಆ ಯುವಕ ಕೂಡಲೇ ಅಲ್ಲೇ ಇದ್ದ ಕಂಬ ಹಿಡಿದು ನಿಂತಿದ್ದಾನೆ.
7 ಗಂಟೆ ನಿಂತುಕೊಂಡೇ ಸಮಯ ಕಳೆದ ಯುವಕ
ಹೀಗಿರುವಾಗ ಆ ನಾಗರಹಾವು ಆತನ ಪ್ಯಾಂಟ್‌ನೊಳಗೇ ಉಳಿದುಕೊಂಡಿದೆ. ಬೆಳಗಾಗುತ್ತಿದ್ದಂತೆಯೇ ಸ್ಥಳೀಯ ಜನರು ಅಲ್ಲಿನ ಹಾವಾಡಿಗನನ್ನು ಕರೆದು ಹಾವನ್ನು ಹೊರ ತೆಗೆಸಿದ್ದಾರೆ. ಈ ಮೂಲಕ ಯುವಕನ ಪ್ರಾಣ ಉಳಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿ ಆಂಬುಲೆನ್ಸ್ ಕೂಡಾ ಕರೆಯಲಾಗಿತ್ತು.