ಬೆಂಗಳೂರು [ನ.14]: ‘ಭಾರತದ ಮುಖ್ಯ ನ್ಯಾಯಾಧೀಶರ (ಸಿಜೆಐ) ಕಚೇರಿ ಒಂದು ಸಾರ್ವಜನಿಕ ಕಚೇರಿಯಾಗಿದ್ದು, ಅದು ಮಾಹಿತಿ ಹಕ್ಕಿನ ಅಡಿ ಬರುತ್ತದೆ’ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್   ಪ್ರಕಟಿಸಿದೆ. 

2010 ರಲ್ಲಿ ದಿಲ್ಲಿ ಹೈಕೋರ್ಟು, ಸಿಜೆಐ ಕಚೇರಿ ಮಾಹಿತಿ ಹಕ್ಕಿನ ಅಡಿ ಒಳಪಡುತ್ತದೆ ಎಂಬ ತೀರ್ಪು ಪ್ರಕಟಿಸಿತ್ತು. ಆದರೆ ಇದನ್ನು ಹೈಕೋರ್ಟ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಸುಪ್ರೀಂ ಕೋರ್ಟ್‌ನ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ನ್ಯಾ| ರಂಜನ್ ಗೊಗೋಯ್, ನ್ಯಾ| ಎನ್.ವಿ. ರಮಣ, ನ್ಯಾ| ಡಿ.ವೈ. ಚಂದ್ರಚೂಡ್, ನ್ಯಾ| ದೀಪಕ್ ಗುಪ್ತಾ ಹಾಗೂ ನ್ಯಾ| ಸಂಜೀವ್ ಖನ್ನಾ ಅವರನ್ನು ಒಳಗೊಂಡ ಪೀಠ ತಿರಸ್ಕರಿಸಿತು. 

ಆದರೆ ‘ಸಿಜೆಐ ಕಚೇರಿ ಮಾಹಿತಿ ಹಕ್ಕಿನ (ಆರ್‌ಟಿಐ) ಅಡಿ ಬರುತ್ತದೆ’ ಎಂದು ತೀರ್ಪು ನೀಡುವ ವೇಳೆ ಪೀಠವು ಕೆಲವು ಷರತ್ತುಗಳನ್ನೂ ವಿಧಿಸಿತು.  ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ನೇಮಕ ಮಾಡುವ ಜವಾಬ್ದಾರಿ ಹೊತ್ತಿರುವ ಕೊಲಿಜಿಯಂ ನ್ಯಾಯಾಧೀಶರ ನೇಮಕ ಸಮಿತಿ), ನ್ಯಾಯಾಧೀಶರ ನೇಮಕಕ್ಕೆ ಹೆಸರುಗಳನ್ನು ಶಿಫಾರಸು ಮಾಡುತ್ತದೆ. ಶಿಫಾರಸು ಆದ ನ್ಯಾಯಾಧೀಶರ ಹೆಸರುಗಳನ್ನಷ್ಟೇ ಆರ್‌ಟಿಐ ಅಡಿ ಬಹಿರಂಗಪಡಿಸಬಹುದು. ಜಡ್ಜ್‌ಗಳ ಹೆಸರು ಶಿಫಾರಸಿಗೆ ಇರುವ ಕಾರಣಗಳನ್ನು ಬಹಿರಂಗಪಡಿಸುವಂತಿಲ್ಲ’ ಎಂಬ ಷರತ್ತನ್ನು ಅದು ಹಾಕಿತು.

‘ಮಾಹಿತಿ ಹಕ್ಕನ್ನು ಸರ್ವೋಚ್ಚ ನ್ಯಾಯಾಲಯದ ಮೇಲೆ ನಿಗಾ ಇಡುವ ಸಾಧನವನ್ನಾಗಿ ಬಳಸಲಾಗದು. ಪಾರದರ್ಶಕತೆಯನ್ನು ಪಾಲಿಸುವ ಸಂದರ್ಭದಲ್ಲಿ ನ್ಯಾಯಾಂಗ ಸ್ವಾತಂತ್ರ್ಯವನ್ನೂ ಗಮನದಲ್ಲಿ ಇರಿಸಿ ಕೊಳ್ಳಬೇಕು’ ಎಂದೂ ನ್ಯಾಯಪೀಠ ಎಚ್ಚರಿಸಿತು. ಖಾಸಗಿತನದ ಹಕ್ಕೂ ಮುಖ್ಯ: ಖಾಸಗಿತನದ ಹಕ್ಕು ಕೂಡ ಮುಖ್ಯ. ಹೀಗಾಗಿ ಸಿಜೆಐ ಕಚೇರಿಯ ಮಾಹಿತಿ ಗಳನ್ನು ಬಹಿರಂಗಪಡಿಸುವ ವೇಳೆ ಪಾರದರ್ಶಕತೆ ಯೊಂದಿಗೆ ಖಾಸಗಿತನವನ್ನು ಸಮತೋಲನದಿಂದ ನೋಡಬೇಕು ಎಂದು ನ್ಯಾಯಪೀಠ ಹೇಳಿತು.

ಪ್ರತ್ಯೇಕ ತೀರ್ಪು: ನ್ಯಾ|ಗೊಗೋಯ್, ನ್ಯಾ| ದೀಪಕ್ ಗುಪ್ತಾ ಹಾಗೂ ನ್ಯಾ| ಖನ್ನಾ ಅವರು ಒಂದೇ ತೀರ್ಪು ಬರೆದರೆ, ನ್ಯಾ| ರಮಣ ಹಾಗೂ ನ್ಯಾ| ಚಂದ್ರಚೂಡ್ ಪ್ರತ್ಯೇಕ ತೀರ್ಪುಗಳನ್ನು ಬರೆದಿದ್ದಾರೆ. ಪ್ರತ್ಯೇಕ ತೀರ್ಪು ಬರೆದ ನ್ಯಾ| ಚಂದ್ರಚೂಡ, ‘ನ್ಯಾಯಾಧೀಶರು ಸಾಂವಿಧಾನಿಕ ಹುದ್ದೆ ಅನುಭವಿ ಸುತ್ತಾರೆ ಹಾಗೂ ಸಾರ್ವಜನಿಕ ಕರ್ತವ್ಯ ಮಾಡುತ್ತಾರೆ. ಹೀಗಾಗಿ ಸಾರ್ವಜನಿಕ ಮಾಹಿತಿ ಬಹಿರಂಗದಿಂದ ಇವರನ್ನು ಅತೀತರು ಎನ್ನಲಾಗದು’ ಎಂದರು. ನ್ಯಾ| ಸಂಜೀವ ಖನ್ನಾ ಹಾಗೂ ನ್ಯಾ| ರಮಣ ಅವರು, ‘ನ್ಯಾಯಾಂಗದ ಸ್ವಾತಂತ್ರ್ಯ ಹಾಗೂ ಪಾರದರ್ಶಕತೆ-ಒಂದಾಗಿ ಸಾಗಬೇಕು. ಎರಡೂ ವಿಷಯಗಳ ಮಧ್ಯೆ ಸಮತೋಲನ ಇರಬೇಕು. ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಣೆ ಆಗಬೇಕು’ ಎಂದರು.

2010 ರ ದಿಲ್ಲಿ ಹೈ ತೀರ್ಪು: 2010 ರಲ್ಲಿ ತೀರ್ಪು ಪ್ರಕ ಟಿಸಿದ್ದ ದಿಲ್ಲಿ ಹೈಕೋರ್ಟ್, ‘ನ್ಯಾಯಾಂಗ ಸ್ವಾತಂತ್ರ್ಯ ಜಡ್ಜ್‌ಗಳಿಗೆ ನೀಡಿದ ಸವಲತ್ತಲ್ಲ. ಅವರಿಗೆ ನೀಡಲಾಗಿರುವ ಹೊಣೆಗಾರಿಕೆ. ಹೀಗಾಗಿ ಸಿಜೆಐ ಕಚೇರಿ ಆರ್‌ಟಿಐಗೆ ಒಳಪಡುತ್ತದೆ’ ಎಂದಿ ತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್ ಹಾಗೂ ಸಾರ್ವ ಜನಿಕ ಸಂಪರ್ಕಾಧಿಕಾರಿಯವರೇ ಸುಪ್ರೀಂ ಕೋ ರ್ಟಲ್ಲಿ ಪ್ರಶ್ನಿಸಿದ್ದರು. ‘ಪಾರದರ್ಶಕತೆ’ ಹೆಸರಿನಲ್ಲಿ ಈ ರೀತಿ ಮಾಹಿತಿ ನೀಡುವಿಕೆ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ವಾದಿಸಿದ್ದರು. ಈ ಕುರಿತ ತೀರ್ಪನ್ನು ಏ.4 ರಂದೇ ಸುಪ್ರೀಂ ಕೋರ್ಟ್ ಕಾದಿರಿಸಿತ್ತು.