ಬೀಜಿಂಗ್‌(ಅ.29): ಭಾರತ-ಚೀನಾ ಗಡಿ ವಿವಾದದಲ್ಲಿ ಭಾರತದ ಪರ ‘ಬ್ಯಾಟ್‌’ ಬೀಸಿರುವ ಅಮೆರಿಕದ ನಡೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಇದು ಭಾರತ-ಚೀನಾದ ದ್ವಿಪಕ್ಷೀಯ ವಿಚಾರವಾಗಿದ್ದು, ಈ ವಿಷಯದಲ್ಲಿ ಅಮೆರಿಕ ಮೂಗು ತೂರಿಸಬಾರದು ಎಂದು ತಾಕೀತು ಮಾಡಿದೆ.

ಮಂಗಳವಾರ ಭಾರತಕ್ಕೆ ಆಗಮಿಸಿದ್ದ ಅಮೆರಿಕ ವಿದೇಶಾಂಗ ಮಂತ್ರಿ ಮೈಕ್‌ ಪಾಂಪೆಯೋ, ‘ಸಾರ್ವಭೌಮತೆ ಹಾಗೂ ಸ್ವಾತಂತ್ರ್ಯ ರಕ್ಷಿಸಿಕೊಳ್ಳುವ ಭಾರತದ ಪ್ರಯತ್ನದಲ್ಲಿ ನಾವೂ ಜತೆಯಾಗಿ ನಿಲ್ಲುತ್ತೇವೆ. ಗಲ್ವಾನ್‌ ಕಣಿವೆಯಲ್ಲಿ ಮಡಿದ ಭಾರತದ ಯೋಧರಿಗೆ ನಾವು ನಮನ ಸಲ್ಲಿಸಿದ್ದೇವೆ. ಚೀನಾ ಕಮ್ಯುನಿಸ್ಟ್‌ ಪಕ್ಷದ ಯಾವುದೇ ರೀತಿಯ ಬೆದರಿಕೆಯನ್ನು ಎದುರಿಸಲು ನಾವು ಸಿದ್ಧವಿದ್ದೇವೆ’ ಎಂದು ಘೋಷಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ವಕ್ತಾರ ವಾಂಗ್‌ ವೆನ್‌ಬಿನ್‌, ‘ಭಾರತ-ಚೀನಾ ನಡುವಿನ ಗಡಿ ವಿಚಾರವು ಕೇವಲ 2 ದೇಶಗಳಿಗೆ ಮಾತ್ರ ಸಂಬಂಧಿಸಿದ್ದು. ಗಡಿಯಲ್ಲಿ ಈಗ ಶಾಂತ ವಾತಾವರಣವಿದೆ. ಚರ್ಚೆಯಲ್ಲೂ ಉಭಯ ದೇಶಗಳು ನಿರತವಾಗಿವೆ’ ಎಂದರು.

ಇಂಡೋ-ಪೆಸಿಫಿಕ್‌ ನೀತಿಯೂ ಆಕ್ಷೇಪಿಸಿದ ಅವರು, ‘ಈ ನೀತಿಯು ಈಗಾಗಲೇ ಮರೆಯಾಗಿರುವ ಶೀತಲ ಸಮರ ಮನಸ್ಥಿತಿಯನ್ನು ಬೋಧಿಸುತ್ತದೆ. ಸಂಘರ್ಷ ಹಾಗೂ ಭೌಗೋಳಿಕ-ರಾಜಕೀಯ ಸಂಘರ್ಷವನ್ನು ಪ್ರೇರೇಪಿಸುತ್ತದೆ. ಅಮೆರಿಕದ ಅಧಿಪತ್ಯವನ್ನು ಎತ್ತಿ ಹಿಡಿವ ಉದ್ದೇಶವನ್ನು ಅದು ಹೊಂದಿದೆ. ಇದರಿಂದ ನಮ್ಮ ಪ್ರದೇಶದ ಹಿತಾಸಕ್ತಿಗೆ ಧಕ್ಕೆ ಬರುತ್ತದೆ. ಹಾಗಾಗಿ ಇದನ್ನು ಅಮೆರಿಕ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.