ಅರುಣಾಚಲ ಪ್ರದೇಶದಲ್ಲಿ ಸದ್ದಿಲ್ಲದೆ ಹಳ್ಳಿ ನಿರ್ಮಿಸಿದ ಚೀನಾ: ಸ್ಯಾಟಲೈಟ್ ಫೋಟೋ ವೈರಲ್
ಲಡಾಖ್ ಬಿಕ್ಕಟ್ಟಿನ ನಡುವೆಯೇ ಚೀನಾದಿಂದ ಮತ್ತೊಂದು ಕಪಟ| ಅರುಇಣಾಚಲ ಪ್ರದೇಶದಲ್ಲಿ ಸದ್ದಿಲ್ಲದೆ ನಿರ್ಮಾಣವಾಗಿದೆ ಹಳ್ಳಿ| ಸ್ಯಾಟಲೈಟ್ ಫೋಟೋ ವೈರಲ್
ಬೀಜಿಂಗ್(ಜ.18): ಚೀನಾ ಜೊತೆಗೆ ನಡೆಯುತ್ತಿರುವ ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನ ನಡುವೆ ಅರುಣಾಚಲ ಪ್ರದೇಶದಲ್ಲಿ ಬಹುದೊಡ್ಡ ಸಂಕಷ್ಟವೊಂದು ತಲೆ ಎತ್ತುತ್ತಿರುವುದು ಬೆಳಕಿಗೆ ಬಂದಿದೆ. ಅರುಣಾಚಲ ಪ್ರದೇಶದಲ್ಲಿ ಸದ್ದಲ್ಲದೇ ಸುಮಾರು 101 ಮನೆಗಳಿರುವ ಚೀನಾ ಹಳ್ಳಿಯೊಂದನ್ನು ನಿರ್ಮಿಸಿದ್ದು, ಸದ್ಯ ಇವುಗಳ ಸ್ಯಾಟಲೈಟ್ ಫೋಟೋ ವೈರಲ್ ಆಗುತ್ತಿದೆ.
ಎನ್‌ಡಿಟಿವಿ ಈ ಬಗ್ಗೆ ಫೋಟೋ ಜೊತೆಗೆ ಪ್ರಕಟಿಸಿದೆ. 2020ರ ನವೆಂಬರ್ 1 ರಂದು ಈ ಫೋಟೋ ತೆಗೆಯಲಾಗಿದೆ. ಅನೇಕ ವಿಶೇಷ ತಜ್ಞರೊಂದಿಗೆ ವಿಮರ್ಶೆ ನಡೆಸಿ ಪಡೆದ ಮಾಹಿತಿಯಂತೆಚ ಈ ಹಳ್ಳಿ ಭಾರತದ ವಾಸ್ತವಿಕ ಗಡಿ ರೇಖೆಗಿಂತ 4.5 ಕಿ. ಮೀ ಒಳಗೆ ನಿರ್ಮಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಭಾರತದ ಪಾಲಿಗೆ ಬಹಳ ಗಂಭೀರ ವಿಚಾರವಾಗಿದೆ.
ಈ ಹಳ್ಳಿ ಸುಬನ್‌ಶಿರಿ ಜಿಲ್ಲೆಯ ತ್ಸಾರಿ ನದಿ ತಟದಲ್ಲಿ ನಿರ್ಮಿಸಲಾಗಿದೆ. ಉಭಯ ರಾಷ್ಟ್ರಗಳ ನಡುವೆ ಇದೇ ಸ್ಥಳಕ್ಕೆ ಸಂಬಂಧಿಸಿದಂತೆ ದೀರ್ಘ ಸಮಯದಿಂದ ವಿವಾದ ನಡೆಯುತ್ತಿದೆ ಹಾಗೂ ಇದನ್ನು ಸಶಸ್ತ್ರ ಹೋರಾಟದ ಸ್ಥಳವೆಂದು ಗುರುತಿಸಲಾಗಿದೆ.