Asianet Suvarna News Asianet Suvarna News

ಅರ್ಧ ಛತ್ತೀಸ್‌ಗಢ ಲಾಕ್ಡೌನ್‌: 28ರ ಪೈಕಿ 17 ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ ಜಾರಿ!

ಅರ್ಧ ಛತ್ತೀಸ್‌ಗಢ ಪೂರ್ಣ ಲಾಕ್ಡೌನ್‌| ಕೋವಿಡ್‌ ನಿಗ್ರಹಕ್ಕೆ 28ರ ಪೈಕಿ 17 ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ ಜಾರಿ| 2ನೇ ಅಲೆ ಬಳಿಕ ಬೃಹತ್‌ ಲಾಕ್‌ಡೌನ್‌ ಘೋಷಿಸಿದ ಮೊದಲ ರಾಜ್ಯ

Chhattisgarh Government announces lockdown in 17 districts amid rising COVID 19 cases pod
Author
Bangalore, First Published Apr 13, 2021, 7:37 AM IST

ರಾಯ್‌ಪುರ(ಏ.13): ಕೊರೋನಾ 2ನೇ ಅಲೆ ಭಾರೀ ವ್ಯಾಪಕವಾಗಿರುವ ಛತ್ತೀಸ್‌ಗಢದಲ್ಲಿ ಸೋಂಕು ನಿಯಂತ್ರಣಕ್ಕಾಗಿ ಅರ್ಧ ರಾಜ್ಯದಲ್ಲಿ ಪೂರ್ಣ ಲಾಕ್ಡೌನ್‌ ಘೋಷಿಸಲಾಗಿದೆ. ಕೇವಲ 3 ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಿತ್ಯ 10000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಇದು ದೇಶದಲ್ಲೇ ಅತಿ ಹೆಚ್ಚಿನ ಸೋಂಕು ದಾಖಲಾಗುತ್ತಿರುವ ಮಹಾರಾಷ್ಟ್ರದ ಬಳಿಕ ಅತಿ ದೊಡ್ಡ ಪ್ರಮಾಣ.

ಹೀಗಾಗಿಯೇ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದ 28 ಜಿಲ್ಲೆಗಳ ಪೈಕಿ 17ರಲ್ಲಿ ಪೂರ್ಣ ಲಾಕ್ಡೌನ್‌ ಜಾರಿ ಮಾಡಿ ಆಯಾ ಜಿಲ್ಲಾಡಳಿತಗಳು ಆದೇಶ ಹೊರಡಿಸಿವೆ. ದೇಶದಲ್ಲಿ ಕೊರೋನಾ 2ನೇ ಅಲೆ ಕಾಣಿಸಿಕೊಂಡ ಬಳಿಕ ಯಾವುದೇ ರಾಜ್ಯವೊಂದರಲ್ಲಿ ಇಷ್ಟುದೊಡ್ಡ ಪ್ರಮಾಣದಲ್ಲಿ ಲಾಕ್ಡೌನ್‌ ಜಾರಿ ಮಾಡುತ್ತಿರುವ ಮೊದಲ ಉದಾಹರಣೆ ಇದಾಗಿದೆ.

ಜೊತೆಗೆ ಛತ್ತೀಸ್‌ಗಢಕ್ಕೆ ಅನ್ಯ ರಾಜ್ಯಗಳಿಂದ ಆಗಮಿಸುವ ಜನರಿಗೆ ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯಗೊಳಿಸಲಾಗಿದೆ. ವರದಿ ಇಲ್ಲದವರಿಗೆ ವಿಮಾನ, ರೈಲು, ಬಸ್‌ ನಿಲ್ದಾಣಗಳಲ್ಲೇ ಕೊರೋನಾ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.

ಮತ್ತೊಂದೆಡೆ ರಾಜ್ಯದ ವಿಪತ್ತು ನಿರ್ವಹಣಾ ನಿಧಿಯಿಂದ ಕೊರೋನಾ ವೈರಸ್‌ ನಿಗ್ರಹಕ್ಕಾಗಿ 50 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಏತನ್ಮಧ್ಯೆ ಸೋಂಕಿತರ ಗುಣಮುಖಕ್ಕಾಗಿ ಅನಿವಾರ್ಯವಾದ ಮತ್ತು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯ ರೆಮ್‌ಡೆಸಿವಿರ್‌ ಚುಚ್ಚುಮದ್ದು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ತಡೆಯಲು ಕ್ರಮ ವಹಿಸಲು ಇಬ್ಬರು ಹಿರಿಯ ಅಧಿಕಾರಿಗಳನ್ನು ಮುಂಬೈ ಮತ್ತು ಹೈದರಾಬಾದ್‌ಗೆ ರವಾನಿಸಲಾಗಿದೆ. ಅಲ್ಲದೆ ರಾಜ್ಯದ ಘಟಕಗಳಲ್ಲಿ ಉತ್ಪಾದಿಸುವ ವೈದ್ಯಕೀಯ ಆಮ್ಲಜನಕದ ಪೈಕಿ ಶೇ.80ರಷ್ಟನ್ನು ರಾಜ್ಯದ ಆಸ್ಪತ್ರೆಗಳಿಗೇ ರವಾನಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

ರಾಜ್ಯದಲ್ಲಿ ಇದುವರೆಗೆ 4.33 ಲಕ್ಷ ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, 4889 ಜನರು ಸಾವನ್ನಪ್ಪಿದ್ದಾರೆ.

Follow Us:
Download App:
  • android
  • ios