ಪ್ರವಾಸ ಮಾಡುವವರಿಗೆ ಕೇಂದ್ರದಿಂದ ಬೋನಸ್!
ಪ್ರವಾಸ ಮಾಡುವವರಿಗೆ ಕೇಂದ್ರದಿಂದ ಬೋನಸ್!| ವರ್ಷಕ್ಕೆ 15 ಪ್ರವಾಸಿ ತಾಣಗಳಿಗೆ ಭೇಟಿ ನೀಡಿ| ವಿಶೇಷ ಭತ್ಯೆ ಪಡೆಯಿರಿ: ಸರ್ಕಾರದ ಆಫರ್
ಭುವನೇಶ್ವರ[ಜ.26]: ಪ್ರವಾಸೋದ್ಯಮ ಉತ್ತೇಜನಕ್ಕೆ ನಾನಾ ರೀತಿಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಘೋಷಿಸುವ ಕೇಂದ್ರ ಸರ್ಕಾರ, ಇದೇ ಮೊದಲ ಬಾರಿಗೆ ನೇರವಾಗಿ ಪ್ರವಾಸಿಗರಿಗೇ ನೆರವು ನೀಡುವಂಥ ಯೋಜನೆ ಜಾರಿಗೆ ನಿರ್ಧರಿಸಿದೆ. ಈ ಯೋಜನೆ ಅನ್ವಯ ಹೆಚ್ಚೆತ್ತು ಪ್ರವಾಸ ಕೈಗೊಳ್ಳುವವರಿಗೆ ಕೇಂದ್ರ ಸರ್ಕಾರವೇ ನೇರವಾಗಿ ಭತ್ಯೆಯನ್ನು ನೀಡಲಿದೆ.
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಈ ಅಚ್ಚರಿಯ ಮತ್ತು ವಿನೂತನ ಯೋಜನೆಯ ಕುರಿತು ಮಾಹಿತಿ ನೀಡಿದ್ದಾರೆ. ‘ಹೆಚ್ಚೆಚ್ಚು ಪ್ರವಾಸ ಕೈಗೊಳ್ಳುವವರು ಭಾರತೀಯ ಪ್ರವಾಸೋದ್ಯಮದ ಪ್ರಚಾರ ರಾಯಭಾರಿಗಳಿದ್ದಂತೆ. ಹೀಗಾಗಿ ಅವರನ್ನು ನಾವು ಗೌರವಿಸುವುದು ಅಗತ್ಯ. ಹೀಗಾಗಿಯೇ ಇಂಥ ಪ್ರವಾಸಿಗರಿಗೆ ಪ್ರಯಾಣ ಭತ್ಯೆ ನೀಡುವ ಯೋಜನೆ ಜಾರಿಗೆ ತರಲಾಗುವುದು. ಶೀಘ್ರವೇ ಈ ಯೋಜನೆಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು’ ಎಂದು ಹೇಳಿದ್ದಾರೆ.
ಹೆಪ್ಪುಗಟ್ಟಿದ ಕಾಶ್ಮೀರದ ದ್ರಾಸ್!
ಆದರೆ ಈ ಯೋಜನೆ ತಮ್ಮ ರಾಜ್ಯದಲ್ಲೇ ಪ್ರವಾಸ ಮಾಡುವವರಿಗೆ ಅನ್ವಯವಾಗದು. ಪ್ರವಾಸಿಗನೊಬ್ಬ, ತನ್ನ ತವರು ರಾಜ್ಯ ಹೊರತುಪಡಿಸಿ, ಇತರೆ ರಾಜ್ಯಗಳ 15 ಸ್ಥಳಗಳಿಗೆ ಒಂದು ವರ್ಷದೊಳಗೆ ಭೇಟಿ ಕೊಡಬೇಕು. ಹೀಗೆ ಭೇಟಿ ಕೊಟ್ಟಿದ್ದಕ್ಕೆ ಸಾಕ್ಷಿಯಾಗಿ ಫೋಟೋಗಳನ್ನು ಪ್ರವಾಸೋದ್ಯಮ ಸಚಿವಾಲಯದ ವೆಬ್‌ಸೈಟ್ ಅಪ್‌ಲೋಡ್ ಮಾಡಬೇಕು. ಬಳಿಕ ಅವರಿಗೆ ಪ್ರಯಾಣ ಭತ್ಯೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಪ್ರವಾಸಿಗರಿಗೆ ಅವರ ಪ್ರಯಾಣದ ಪೂರ್ಣ ವೆಚ್ಚ ನೀಡಲಾಗುವುದೇ ಅಥವಾ ಭಾಗಶಃ ಆರ್ಥಿಕ ನೆರವು ನೀಡಲಾಗುವುದೇ ಎಂದು ಅವರು ಸ್ಪಷ್ಟಪಡಿಸಿಲ್ಲ.
ಕಾಲಿಲ್ಲ, ವ್ಹೀಲ್‌ಚೇರ್ ಇಲ್ಲ, ಆದ್ರೂ ಜಗವನ್ನೇ ಸುತ್ತಿದ!
ಇದೇ ವೇಳೆ ಪ್ರವಾಸಿ ಮಾರ್ಗದರ್ಶಿಗಳಿಗೆ ಸರ್ಟಿಫಿಕೇಟ್ ಕೋರ್ಸ್ ಕೂಡ ಆರಂಭಿಸಲಾಗುವುದು ಎಂದು ಸಚಿವ ಪಟೇಲ್ ತಿಳಿಸಿದ್ದಾರೆ.