ಕಾಂಗ್ರೆಸ್‌ ನಾಯಕರು ಸದಸ್ಯರಾಗಿರುವ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿ. (ಎಜೆಎಲ್‌) ನಿವೇಶನ ಮರುಹಂಚಿಕೆ ಪ್ರಕರಣ| ಎಜೆಎಲ್‌ ಕೇಸ್‌: ಹರ್ಯಾಣ ಮಾಜಿ ಸಿಎಂ ವಿರುದ್ಧ ದೋಷಾರೋಪ

ನವದೆಹಲಿ(ಏ.17): ಕಾಂಗ್ರೆಸ್‌ ನಾಯಕರು ಸದಸ್ಯರಾಗಿರುವ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿ. (ಎಜೆಎಲ್‌) ನಿವೇಶನ ಮರುಹಂಚಿಕೆ ಪ್ರಕರಣದಲ್ಲಿ ಹರಾರ‍ಯಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಅವರ ವಿರುದ್ಧ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯ ದೋಷಾರೋಪ ದಾಖಲಿಸಿದೆ.

ವಂಚನೆ, ಕ್ರಿಮಿನಲ್‌ ಸಂಚು ಆರೋಪಗಳನ್ನು ದೋಷಾರೋಪದಲ್ಲಿ ಹೊರಿಸಲಾಗಿದೆ. ಇತ್ತೀಚೆಗೆ ನಿಧನರಾದ ಎಜೆಎಲ್‌ ಅಧ್ಯಕ್ಷ ಮೋತಿಲಾಲ್‌ ವೋರಾ ಕೂಡ ಪ್ರಕರಣದ ಆರೋಪಿ. ಈ ಕುರಿತ ವಿಚಾರಣೆ ಮೇ 7ರಿಂದ ಆರಂಭವಾಗಲಿದೆ.

ಏನಿದು ಪ್ರಕರಣ?:

ಪಂಚಕುಲದಲ್ಲಿ ಎಜೆಎಲ್‌ಗೆ 1982ರಲ್ಲಿ ನಿವೇಶನ ಹಂಚಲಾಗಿತ್ತು. ನಿಯಮದ ಪ್ರಕಾರ 10 ವರ್ಷದೊಳಗೆ ಕಟ್ಟಡ ನಿರ್ಮಾಣ ನಡೆಯದ ಕಾರಣ ದಶಕದ ಬಳಿಕ ಭೂಮಿಯನ್ನು ಸರ್ಕಾರ ವಾಪಸು ಪಡೆದಿತ್ತು. ಆದರೂ 2005ರಲ್ಲಿ ಈ ಆದೇಶ ಗಾಳಿಗೆ ತೂರಿದ ಹೂಡಾ ಸರ್ಕಾರ ಅದೇ ನಿವೇಶನವನ್ನು ಎಜೆಎಲ್‌ಗೆ ಮತ್ತೆ ನೀಡಿತ್ತು. ಹೂಡಾರ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ 47 ಲಕ್ಷ ರು. ಹಾನಿಯಾಗಿದೆ ಎಂಬುದು ಸಿಬಿಐ ಆರೋಪ.