ನವದೆಹಲಿ(ಏ.06): ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಹಹೀಗಿದ್ದರೂ ಕಳೆದ ಐದು ದಿನಗಳಿಂದ ಪರಿಸ್ಥಿತಿ ಕೊಂಚ ಹದಗೆಟ್ಟಿದ್ದು, ಸೋಂಕಿತರ ಹಾಗೂ ಮೃತರ ಸಂಖ್ಯೆ ಹೆಚ್ಚಲಾರಂಭಿಸಿದೆ. ಹೀಗಿರುವಾಗ ಮುಂದಿನ ಒಂದು ವರ್ಷ ಸಂಸತ್ತು ಸದಸ್ಯರ ವೇತನವನ್ನು ಶೇ. 30 ರಷ್ಟು ಇಳಿಸಲು ಸುಗ್ರೀವಾಜ್ಞೆ ಹೊರಡಿಸಲಾಗಿದೆ. 

ಸುದ್ದಿಗೋಷ್ಟಿ ನಡೆಸಿ ಈ ಮಾಹಿತಿ ನೀಡಿದ ಸಚಿವ ಪ್ರಕಾಶ್ ಜಾವ್ಡೇಕರ್ ಸಂಸದರ ವೇತನ ಕಡಿತಗೊಳಿಸುವುದರೊಂದಿಗೆ, ಅವರ ಕ್ಷೇತ್ರಾಭಿವೃದ್ಧಿಗೆಂದು ಮೀಸಲಾಗಿಡುವ ಸಂಸದರ ನಿಧಿಯನ್ನು ಮುಂದಿನ ಎರಡು ವರ್ಷ 2020-21 ಹಾಗೂ 2021-22 ತಾತ್ಕಾಲಿಕವಾಗಿ ಅಮಾನತ್ತುಗೊಳಿಸಲಾಗುತ್ತದೆ ಎಂದಿದ್ದಾರೆ. ಸಂಸದರ ನಿಧಿಗೆ ಮೀಸಲಾಗಿಡುವ 7900 ಕೋಟಿ ರೂ. ಮುಂದಿನ ಎರಡು ವರ್ಷದವರೆಗೆ ಭಾರತ ಸರ್ಕಾರದ ಕ್ರೋಡೀಕೃತ ಖಾತೆಗೆ ಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಎಲ್ಲಾ ರಾಜ್ಯಗಳ ರಾಜ್ಯಪಾಲರು ಈಗಾಗಲೇ ತಮ್ಮ ವೇತನದಲ್ಲಿ ಒಂದು ಭಾಗವನ್ನು ಸಾಮಾಜಿಕ ಅಭಿವೃದ್ಧಿಗೆ ಬಳಸುವಂತೆ ಸೂಚಿಸಿದ್ದು, ಈ ಹಣವೂ ಭಾರತ ಸರ್ಕಾರದ ಕ್ರೋಡೀಕೃತ ಖಾತೆಗೆ ಹಾಕಲಾಗುತ್ತದೆ ಎಂದು ಜಾವ್ಡೇಕರ್ ತಿಳಿಸಿದ್ದಾರೆ. 

ಕ್ಯಾಬಿನೆಟ್‌ ನಿರ್ಧಾರಕ್ಕೆ ಕಾಂfಗ್ರೆಸ್ ಬೆಂಬಲ

ಇನ್ನು ಕ್ಯಾಬಿನೆಟ್‌ ತೆಗೆದುಕೊಂಡ ಈ ನಿರ್ಧಾರವನ್ನು ಕಾಂಗ್ರೆಸ್ ಸ್ವಾಗತಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷದ ವಕ್ತಾರ ರಣ್ದೀಪ್ ಸುರ್ಜೇವಾಲಾ 'ಪ್ರಧಾನಿಯವರೇ, ಸಂಸದರ ವೇತನ ಕಡಿತಗೊಳಿಸುವ ನಿರ್ಧಾರವನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಆದರೆ ದಯವಿಟ್ಟು ಗಮನಿಸಿ, ಸಂಸದರ ನಿಧಿ ಇರುವುದು ಕ್ಷೇತ್ರದ ಅಭಿವೃದ್ಧಿಗಾಗಿ. ಇದನ್ನು ತತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರೆ ಕ್ಷೇತ್ರಾಭಿವೃದ್ಧಿ ಕಾರ್ಯಗಳು ನಿಲ್ಲುತ್ತವೆ' ಎಂದಿದ್ದಾರೆ.