ರಾಜ್ಯಗಳ ಎಲ್ಲೆ ಇಲ್ಲದೆ ಬೆಳೆ ಮಾರಾಟ ಬಿತ್ತನೆಗೂ ಮೊದಲೇ ಬೆಳೆ ವ್ಯಾಪಾರ ಅವಕಾಶ

ಕೊರೋನಾ ವೈರಸ್‌ನಿಂದ ಆರ್ಥಿಕತೆ ಪುನಶ್ಚೇತನಗೊಳಿಸಲು 20 ಲಕ್ಷ ಕೋಟಿ ರು. ಪ್ಯಾಕೇಜ್‌ ಘೋಷಿಸಿದ್ದ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಸುಧಾರಣೆಗೆ ಕೆಲವೊಂದು ಕ್ರಮಗಳನ್ನು ಆ ಪ್ಯಾಕೇಜ್‌ ಜತೆಗೆ ಪ್ರಕಟಿಸಿತ್ತು. ಈ ವಾರದಲ್ಲೇ ಎರಡನೇ ಬಾರಿಗೆ ನಡೆದ ಕೇಂದ್ರ ಸಚಿವ ಸಂಪುಟ, ಆ ಸುಧಾರಣೆಗಳಿಗೆ ಬುಧವಾರ ಅನುಮೋದನೆ ನೀಡಿದೆ. ರೈತರ ಆದಾಯವನ್ನು 2022ರೊಳಗೆ ದ್ವಿಗುಣಗೊಳಿಸುವ ಉದ್ದೇಶ ಹೊಂದಿರುವ ಸರ್ಕಾರ ಕ್ರಾಂತಿಕಾರಿಕ ಸುಧಾರಣೆಗಳಿಗೆ ನಾಂದಿ ಹಾಡಿದೆ.

ಉದ್ಯಮಿಗಳಿಗೆ ರೈತರು ನೇರ ಬೆಳೆ ಮಾರಲು ಸುಗ್ರೀವಾಜ್ಞೆ

ಕೃಷಿಕರು ತಾವು ಬೆಳೆಯುವ ಉತ್ಪನ್ನಗಳನ್ನು ಆಹಾರ ಸಂಸ್ಕರಣೆಗಾರರು, ಸಗಟು ವ್ಯಾಪಾರಿಗಳು, ಬೃಹತ್‌ ಚಿಲ್ಲರೆ ವ್ಯಾಪಾರಿಗಳು ಹಾಗೂ ರಫ್ತುದಾರರಿಗೆ ನೇರವಾಗಿ ಮಾರಾಟ ಮಾಡುವುದಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ‘ಬೆಲೆ ಖಾತ್ರಿ ಹಾಗೂ ಕೃಷಿ ಸೇವೆಗಳ ಸಂಬಂಧ ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಸುಗ್ರೀವಾಜ್ಞೆ’ಗೆ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ. ಬಿತ್ತನೆಗೂ ಮುನ್ನವೇ ರೈತರು ತಮ್ಮ ಬೆಳೆಗಳನ್ನು ಮಾರಾಟಗಾರರಿಗೆ ಮಾರಲು ಗುತ್ತಿಗೆ ಕರಾರು ಮಾಡಿಕೊಳ್ಳಲು ಈ ಸುಗ್ರೀವಾಜ್ಞೆಯಡಿ ಅವಕಾಶವಿದೆ. ಉದಾಹರಣೆಗೆ, ಒಬ್ಬ ರೈತ ಕೇಜಿಗೆ 10 ರು.ನಂತೆ ಬಾಳೆಹಣ್ಣು ಮಾರಲು ಬಿತ್ತನೆಗೂ ಮುನ್ನವೇ ಒಪ್ಪಂದ ಮಾಡಿಕೊಂಡಿದ್ದರೆ, ಕಟಾವಿನ ಬಳಿಕ ಅಷ್ಟುಬೆಲೆ ಆತನಿಗೆ ನಿಶ್ಚಿತವಾಗಿ ಸಿಗಲಿದೆ. ಒಂದು ವೇಳೆ ಕಟಾವಿನ ಬಳಿಕ ಮಾರುಕಟ್ಟೆಯಲ್ಲಿ ಬೆಲೆ ಒಪ್ಪಂದಕ್ಕಿಂತಲೂ ಅಧಿಕವಾಗಿದ್ದರೆ, ಹೆಚ್ಚಿನ ಬೆಲೆಯಲ್ಲೂ ಪಾಲು ಸಿಗಲಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ತಿಳಿಸಿದರು.

ಎಪಿಎಂಸಿಯಿಂದಾಚೆಗೂ ಕೃಷಿ ಉತ್ಪನ್ನ ಮಾರಾಟಕ್ಕೆ ಅಧ್ಯಾದೇಶ

ಯಾವುದೇ ಅಡೆತಡೆ ಇಲ್ಲದೇ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಎಸಿ)ಯಿಂದಾಚೆಗೂ ರೈತರು ತಮ್ಮ ಬೆಳೆ ಮಾರಾಟ ಮಾಡುವುದಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ‘ಒಂದು ದೇಶ, ಒಂದೇ ಕೃಷಿ ಮಾರುಕಟ್ಟೆ’ಗೆ ಹಾದಿ ಸುಗಮವಾಗಲಿದೆ. ಮಂಡಿಯಿಂದ ಆಚೆ ಮಾರಾಟ ಮಾಡುವ ಹಾಗೂ ಖರೀದಿ ಮಾಡುವ ಕೃಷಿ ಉತ್ಪನ್ನಗಳಿಗೆ ರಾಜ್ಯ ಸರ್ಕಾರಗಳು ತೆರಿಗೆ ವಿಧಿಸುವುದನ್ನು ‘ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಸುಗ್ರೀವಾಜ್ಞೆ’ ನಿರ್ಬಂಧಿಸುತ್ತದೆ. ಉತ್ತಮ ಬೆಲೆಗೆ ರೈತರು ತಮ್ಮ ಬೆಳೆ ಮಾರಲು ಅವಕಾಶ ನೀಡುತ್ತದೆ. ಹಾಲಿ ಇರುವ ನಿಯಮಗಳ ಪ್ರಕಾರ, ರೈತರು ತಮ್ಮ ಉತ್ಪನ್ನಗಳನ್ನು ದೇಶಾದ್ಯಂತ ಇರುವ 6900 ಎಪಿಎಂಸಿಗಳಲ್ಲಿ ಮಾತ್ರವೇ ಮಾರಬೇಕು. ಸಂಪುಟ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ಈಗ ಇರುವ ಎಪಿಎಂಸಿಗಳು ಮೊದಲಿನಂತೆಯೇ ಕಾರ್ಯನಿರ್ವಹಿಸಲಿವೆ. ರಾಜ್ಯಗಳ ಎಪಿಎಂಸಿ ಕಾಯ್ದೆಯೂ ಇರುತ್ತದೆ. ಎಪಿಎಂಸಿಯಿಂದಾಚೆಗೆ ಈ ಕಾಯ್ದೆ ಅನ್ವಯವಾಗುತ್ತದೆ. ಅಲ್ಲದೆ ರಾಜ್ಯದೊಳಗೆ ಹಾಗೂ ರಾಜ್ಯದ ಹೊರಗೆ ಬೆಳೆ ಮಾರಲು ರೈತರಿಗೆ ಅವಕಾಶ ಕಲ್ಪಿಸುತ್ತದೆ ಎಂದು ವಿವರಿಸಿದರು.