ಅನೇಕ ರಾಜ್ಯಗಳಲ್ಲಿ ಹಿಂಸಾಚಾರ ಮುಂದುವರಿದಿದೆ. ಕಲ್ಲು ತೂರಾಟ, ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚುವುದು ನಡೆದಿದೆ. ಇದನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿ, ಕೊನೆಗೆ ಗೋಲಿಬಾರ್‌ ಮಾಡಿದ್ದಾರೆ. 

ನವದೆಹಲಿ [ಡಿ.21]: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಹೋರಾಟಗಳು ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಶುಕ್ರವಾರವೂ ಅನೇಕ ರಾಜ್ಯಗಳಲ್ಲಿ ಹಿಂಸಾಚಾರ ಮುಂದುವರಿದಿದೆ. ಕಲ್ಲು ತೂರಾಟ, ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚುವುದು ನಡೆದಿದೆ. ಇದನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿ, ಕೊನೆಗೆ ಗೋಲಿಬಾರ್‌ ಮಾಡಿದ್ದಾರೆ. ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಗಲಭೆ ನಡೆದಿದ್ದು, ಶುಕ್ರವಾರ ಒಂದೇ ದಿನ 6 ಮಂದಿ ಸಾವನ್ನಪ್ಪಿದ್ದಾರೆ. ಗುರುವಾರ ಕೂಡ ಒಬ್ಬ ವ್ಯಕ್ತಿ ಗಲಭೆಯಲ್ಲಿ ಮೃತಪಟ್ಟಿದ್ದ. ಇದರಿಂದಾಗಿ ಪೌರತ್ವ ಕಾಯ್ದೆ ವಿರೋಧಿ ಗಲಭೆಗೆ 24 ತಾಸಿನಲ್ಲಿ ಉತ್ತರಪ್ರದೇಶವೊಂದರಲ್ಲೇ ಬಲಿಯಾದವರ ಸಂಖ್ಯೆ 7ಕ್ಕೇರಿಕೆಯಾಗಿದೆ.

ಇದಲ್ಲದೆ ದೆಹಲಿ, ಗುಜರಾತ್‌, ಮಧ್ಯಪ್ರದೇಶ, ಮಹಾರಾಷ್ಟ್ರ, ಕೇರಳ ಹಾಗೂ ಇನ್ನೂ ಅನೇಕ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿದ್ದು, ಬಹುತೇಕ ರಾಜ್ಯಗಳಲ್ಲಿ ಗಲಭೆ ಸೃಷ್ಟಿಯಾಗಿದೆ.

ಉತ್ತರಪ್ರದೇಶದಲ್ಲಿ 6 ಸಾವು:

ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಹಿಂಸಾಚಾರ ಸಂಭವಿಸಿದೆ. ಗೋರಖಪುರ, ಸಂಭಲ್‌, ಭದೋಹಿ, ಬಹ್ರೈಚ್‌, ಫರೂಖಾಬಾದ್‌, ಬುಲಂದಶಹರ್‌, ವಾರಾಣಸಿ, ಫಿರೋಜಾಬಾದ್‌, ಕಾನ್ಪುರ, ಬಿಜ್ನೋರ್‌, ಮೇರಠ್‌ ಹಾಗೂ ಇನ್ನೂ ಅನೇಕ ಜಿಲ್ಲೆಗಳಲ್ಲಿ ವ್ಯಾಪಕ ಗಲಭೆ ಸೃಷ್ಟಿಯಾಗಿದೆ.

ಈ ಪೈಕಿ ಬಿಜ್ನೋರ್‌, ಕಾನ್ಪುರ, ಸಂಭಲ್‌, ಫಿರೋಜಾಬಾದ್‌, ಮೇರಠ್‌ನಲ್ಲಿ ಸಂಭವಿಸಿದ ಗಲಭೆಗಳಲ್ಲಿ ಒಟ್ಟು 6 ಜನ ಸಾವನ್ನಪ್ಪಿದ್ದಾರೆ. ಬಿಜ್ನೋರ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದರೆ ಉಳಿದ ಕಡೆ ತಲಾ ಒಬ್ಬರು ಅಸುನೀಗಿದ್ದಾರೆ. 100ಕ್ಕೂ ಮಂದಿ ಗಾಯಗೊಂಡಿದ್ದು, ಇವರಲ್ಲಿ 50 ಪೊಲೀಸರೂ ಇದ್ದಾರೆ.

ಅನೇಕ ಕಡೆ ಕಲ್ಲು ತೂರಾಟ, ವಾಹನಗಳು ಹಾಗೂ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚುವ ಘಟನೆಗಳು ನಡೆದಿವೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ, ಅಶ್ರುವಾಯು ನಡೆಸಿದ್ದಾರೆ. ಕೊನೆಗೆ ಗೋಲಿಬಾರ್‌ ಕೂಡ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ ಹಿಂಸಾಚಾರ ತೀವ್ರಗೊಳ್ಳುತ್ತಿದ್ದಂತೆಯೇ ರಾಜ್ಯಾದ್ಯಂತ 144ನೇ ಸೆಕ್ಷನ್‌ ಅಡಿ ನಿಷೇಧಾಜ್ಞೆ ಹೇರಲಾಗಿದೆ. ವದಂತಿಯ ಮೂಲವಾಗಿರುವ ಇಂಟರ್ನೆಟ್‌ ಸೌಲಭ್ಯವನ್ನು ಅನೇಕ ಕಡೆ ಬ್ಲಾಕ್‌ ಮಾಡಲಾಗಿದೆ. ಅಲಿಗಢ, ಮೌ, ಆಜಂಗಢ, ಕಾನ್ಪುರ, ಬರೇಲಿ, ಶಹಜಹಾನ್‌ಪುರ, ಗಾಜಿಯಾಬಾದ್‌, ಬುಲಂದಶಹರ್‌, ಸಂಭಲ್‌, ಅಲಹಾಬಾದ್‌ನಲ್ಲಿ 45 ಗಂಟೆಗಳ ಕಾಲ ಇಂಟರ್ನೆಟ್‌ ಸೌಲಭ್ಯ ಸ್ಥಗಿತಗೊಳಿಸಲು ಆದೇಶಿಸಲಾಗಿದೆ.

ದಿಲ್ಲಿಯಲ್ಲಿ ಮತ್ತೆ ಹಿಂಸೆ:

ದಿಲ್ಲಿಯ ದರಿಯಾಗಂಜ್‌ನಲ್ಲಿ ಶುಕ್ರವಾರ ಸಂಜೆ ಹಿಂಸಾಚಾರ ಸಂಭವಿಸಿದ್ದು, ಉದ್ರಿಕ್ತರು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಉದ್ರಿಕ್ತರ ಚದುರಿಸಲು ಲಾಠಿ ಪ್ರಹಾರ ನಡೆಸಲಾಗಿದೆ.

ಇದಕ್ಕೂ ಮುನ್ನ ಶುಕ್ರವಾರದ ಪ್ರಾರ್ಥನೆ ಮುಗಿಸಿದ ನಂತರ ಒಂದು ಕೋಮಿನವರು ಬೀದಿಗಿಳಿದು ಜಾಮಾ ಮಸೀದಿ ಹೊರಗೆ ಪ್ರತಿಭಟನೆ ಆರಂಭಿಸಿದರು. ಬಳಿಕ ಇಂಡಿಯಾ ಗೇಟ್‌, ಸೆಂಟ್ರಲ್‌ ಪಾರ್ಕ್ನಲ್ಲೂ ಸಾವಿರಾರು ಜನ ನೆರೆದು ‘ಸಂವಿಧಾನ ಉಳಿಸಿ’ ಪ್ರತಿಭಟನೆ ನಡೆಸಿ ಧರ್ಮಾಧಾರಿತವಾಗಿ ದೇಶ ವಿಭಜಿಸುವ ಯತ್ನ ನಡೆದಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದರು. ಈ ಪ್ರತಿಭಟನೆಯಲ್ಲಿ ಸಂಜೆ ವೇಳೆಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಕೂಡ ಭಾಗಿಯಾದರು.

ಭೀಮ್‌ ಆರ್ಮಿಯ ಚಂದ್ರಶೇಖರ ಆಜಾದ್‌ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಯಿತು. ಪೊಲೀಸ್‌ ವಶದಿಂದ ಅವರು ತಪ್ಪಿಸಿಕೊಂಡ ಪ್ರಸಂಗವೂ ಜರುಗಿತು.

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅಮಿತ್‌ ಶಾ ಮನೆ ಬಳಿ ಪ್ರತಿಭಟನೆಗೆ ಆಗಮಿಸಿದಾಗ ಬಂಧನಕ್ಕೊಳಗಾದರು. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯಲ್ಲಿ ಕೂಡ ವಿದ್ಯಾರ್ಥಿಗಳು, ‘ಪೌರತ್ವ ಕಾಯ್ದೆ ಬೇಡ, ಎನ್‌ಆರ್‌ಸಿ ಬೇಡ’ ಎಂಬ ಕ್ಯಾಪ್‌ಗಳನ್ನು ವಿದ್ಯಾರ್ಥಿಗಳು ಧರಿಸಿದ್ದರು.

ಗುಜರಾತ್‌ನಲ್ಲಿ ಕಲ್ಲು ತೂರಾಟ:

ಗುಜರಾತ್‌ನ ವಡೋದರಾ ಹಾಗೂ ಬನಾಸ್‌ಕಾಂಠಾ ಜಿಲ್ಲೆಗಳಲ್ಲಿ ಹಿಂಸಾಚಾರ ಸಂಭವಿಸಿದೆ. ವಡೋದರಾದ ಹಾಥಿಖಾನಾ ಪ್ರದೇಶದ ಮಸೀದಿ ಹೊರಗೆ ಉದ್ರಿಕ್ತರು ಪೊಲೀಸರ ಮೇಲೆ ಕಲ್ಲು ತೂರಿದರು. ನಮಾಜ್‌ ಚಿತ್ರೀಕರಣ ಮಾಡುತ್ತಿದ್ದ ಪೊಲೀಸರನ್ನು ಪ್ರಶ್ನಿಸಿ ಗಲಭೆ ನಡೆಸಲಾಗಿದೆ.

ಮಹಾರಾಷ್ಟ್ರದಲ್ಲಿ ಕಲ್ಲೆಸೆತ:

ಮಹಾರಾಷ್ಟ್ರದ ಬೀಡ್‌, ನಾಂದೇಡ್‌ ಹಾಗೂ ಪರಭಣಿ ಜಿಲ್ಲೆಗಳಲ್ಲಿ ಗಲಭೆ ನಡೆದಿದೆ. ಸರ್ಕಾರಿ ಬಸ್‌ಗಳ ಮೇಲೆ ಉದ್ರಿಕ್ತರು ಕಲ್ಲು ತೂರಿದ್ದಾರೆ. ಪುಣೆಯಲ್ಲಿ 10 ಸಾವಿರ ಜನರು ಸೇರಿ ಪ್ರತಿಭಟನೆ ನಡೆಸಿದರು.

ಮಧ್ಯಪ್ರದೇಶದಲ್ಲಿ ಕರ್ಫ್ಯೂ

ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಜರುಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗೋಹಾಲ್‌ಪುರ ಹಾಗೂ ಹನುಮಾನ್‌ತಾಲ್‌ ಎಂಬಲ್ಲಿ ಕರ್ಫ್ಯೂ ಹೇರಲಾಗಿದೆ.

ಕೇರಳದಲ್ಲಿ ರಸ್ತೆ ತಡೆ:

ಪಕ್ಕದ ಕರ್ನಾಟಕದ ಮಂಗಳೂರಿನಲ್ಲಿ ಹಿಂಸಾಚಾರ ಉಂಟಾದ ಹಿನ್ನೆಲೆಯಲ್ಲಿ ಹಾಗೂ ಕೇರಳದ ಕೆಲವು ಪತ್ರಕರ್ತರನ್ನು ಅಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಕೇರಳದಲ್ಲಿ ಪ್ರತಿಭಟನೆಗಳು ನಡೆದವು. ಕಲ್ಲಿಕೋಟೆಯಲ್ಲಿ ಕಾಂಗ್ರೆಸ್ಸಿಗರು ರಸ್ತೆ ತಡೆ ನಡೆಸಿದರು. ಮಂಗಳೂರು ಗಲಭೆ ಕಾರಣ ಅಲ್ಲಿಗೆ ಸರ್ಕಾರಿ ಬಸ್‌ ಸೇವೆಯನ್ನು ಕೇರಳ ಸಾರಿಗೆ ಸಂಸ್ಥೆ ನಿಲ್ಲಿಸಿದೆ. ರಾಜ್ಯದಲ್ಲಿ ಹೈ ಅಲರ್ಟ್‌ ಸಾರಲಾಗಿದೆ.

ಚೆನ್ನೈನಲ್ಲಿ ಸಿದ್ಧಾಥ್‌ರ್‍ ಮೇಲೆ ಕೇಸು:

ಚೆನ್ನೈನಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ‘ರಂಗ್‌ದೇ ಬಸಂತಿ’ ಖ್ಯಾತಿಯ ನಟ ಸಿದ್ಧಾಥ್‌ರ್‍, ಸಂಗೀತಗಾರ ಟಿ.ಎಂ. ಕೃಷ್ಣ ಸೇರಿದಂತೆ 600 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಸ್ಸಾಂನಲ್ಲಿ ಇಂಟರ್ನೆಟ್‌ ಸೇವೆ ಆರಂಭ:

ಇಂಟರ್ನೆಟ್‌ ಸೇವೆ ಆರಂಭಿಸಬೇಕು ಎಂದು ಕೋರ್ಟ್‌ ಆದೇಶಿಸಿದ ಕಾರಣ, 10 ದಿನಗಳ ತರುವಾಯ ಅಸ್ಸಾಂನಲ್ಲಿ ಅಂತರ್ಜಾಲ ಸೇವೆ ಶುಕ್ರವಾರ ಆರಂಭವಾಯಿತು. ಆದರೆ ಬಂಗಾಳದಲ್ಲಿ ಗಲಭೆ ಕಾರಣ ಅಲ್ಲಲ್ಲಿ ಅಂತರ್ಜಾಲ ಸೇವೆ ಶುಕ್ರವಾರವೂ ಸ್ಥಗಿತವಾಗಿತ್ತು.

ಅಮೆರಿಕದಲ್ಲೂ ಪೌರತ್ವ ಪ್ರತಿಭಟನೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಅಮೆರಿಕಕ್ಕೂ ವ್ಯಾಪಿಸಿದ್ದು, ಶಿಕಾಗೋ ಹಾಗೂ ಬೋಸ್ಟನ್‌ನಲ್ಲಿ ಭಾರತೀಯರು ಪ್ರತಿಭಟನೆ ನಡೆಸಿದ್ದಾರೆ.

ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲ-ಸೋನಿಯಾ

ಪೌರತ್ವ ಕುರಿತು ಜನರ ಹಾಗೂ ವಿದ್ಯಾರ್ಥಿಗಳ ಹೋರಾಟವನ್ನು ಬೆಂಬಲಿಸುವುದಾಗಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಜನರ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಕಾಂಗ್ರೆಸ್‌ ಪಕ್ಷ ಬದ್ದವಾಗಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ರಾಜ್ಯಗಳಲ್ಲಿ ಪೌರತ್ವ ಕಾಯ್ದೆ ಜಾರಿ ಇಲ್ಲ-ವೇಣು

ಅಸಂವಿಧಾನಿಕವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್‌ ಆಡಳಿತದ ರಾಜ್ಯಗಳಲ್ಲಿ ಜಾರಿಗೊಳಿಸುವುದಿಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ.