ಬಿಎಸ್‌ಎನ್‌ಎಲ್ (BSNL) ತನ್ನ ಗ್ರಾಹಕರ ಸೆಳೆಯಲು ಮತ್ತೊಂದು ಭರ್ಜರಿ ಪ್ಲಾನ್ ಒಂದನ್ನು ಹೊತ್ತು ತಂದಿದೆ. BSNL ಫ್ರೀಡಂ 2.0 ಎಂದು ತನ್ನ ಹೊಸ ಪ್ಲಾನ್‌ಗೆ ನಾಮಕರಣ ಮಾಡಿದ್ದು, ಅತೀ ದೊಡ್ಡ ಆಫರ್ ಇದಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.
ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (Bharat Sanchar Nigam Limited) ಇತ್ತೀಚೆಗೆ ಗ್ರಾಹಕರ ಸ್ನೇಹಿಯಾಗಿ ಸೇವೆ ನೀಡುತ್ತಿದೆ. ಅದರ ಮುಂದುವರಿದ ಭಾಗವಾಗಿ ಇದೀಗ BSNL ಫ್ರೀಡಂ 2.0 ಎಂಬ ಹೊಸ ಯೋಜನೆ ಪರಿಚಯಿಸಿದೆ.
ಏನದು?
ಬಿಎಸ್‌ಎನ್‌ಎಲ್‌ನ ಹೊಸ ಯೋಜನೆಯು ಅಕ್ಟೋಬರ್ 12 ರವರೆಗೆ ಮಾತ್ರ ಲಭ್ಯವಿರುತ್ತದೆ. ಅಷ್ಟರೊಳಗೆ ನೀವು ಸಿಮ್ ಖರೀದಿಸಿದ್ರೆ ಈ ಆಫರ್ ನಿಮಗೆ ಅನ್ವಯ ಆಗಲಿದೆ. ಇನ್ನು, ಆಫರ್ ಏನು ಎಂದು ನೋಡೋದಾದ್ರೆ.. BSNL ಕೇವಲ 1 ರೂ.ಗೆ ಸಿಮ್ ಕಾರ್ಡ್ ನೀಡುತ್ತಿದೆ. ಅದು 24 ದಿನಗಳ ಕಾಲ ಮಾನ್ಯವಾಗಿರುತ್ತದೆ. ಜೊತೆಗೆ ಉಚಿತ ಅನಿಯಮಿತ ಕರೆಗಳನ್ನು ನೀವು ಮಾಡಬಹುದಾಗಿದೆ..
ಏನೆಲ್ಲ ಬಳಕೆ ಮಾಡಬಹುದು?
ದೇಶದ ಯಾವುದೇ ನೆಟ್‌ವರ್ಕ್‌ಗೆ ನೀವು ಅನಿಯಮಿತವಾಗಿ ಕರೆ ಮಾಡಬಹುದು. ಈ ವಿಶೇಷ ಆಫರ್, ಒಂದು ನೆಟ್‌ವರ್ಕ್‌ನಿಂದ ಇನ್ನೊಂದು ಬಿಎಸ್‌ಎನ್‌ಎಲ್‌ಗೆ ಬರುತ್ತಿರೋರಿಗೆ ಹಾಗೂ ಹೊಸ ಸಿಮ್ ಕಾರ್ಡ್ ಅನ್ವಯಿಸುತ್ತದೆ. ಈಗಾಗಲೇ ನೀವು ಬಿಎಸ್‌ಎನ್‌ಎಲ್ ಸಿಮ್ ಬಳಸುತ್ತಿದ್ದರೆ ನಿಮಗೆ ಈ ಆಫರ್ ಸಿಗೋದಿಲ್ಲ.
- ದಿನಕ್ಕೆ ಒಂದು ಜಿಬಿ ಡೇಟಾ ಉಚಿತ
- ಅನ್‌ಲಿಮಿಟೆಡ್ ಕರೆಗಳು
- ದಿನಕ್ಕೆ 100 ಸಂದೇಶಗಳು ಉಚಿತ
- 24 ದಿನ ವ್ಯಾಲಿಡಿಟಿ
ಉದ್ದೇಶ ಏನು?
ಹೊಸ ಗ್ರಾಹಕರನ್ನು ತನ್ನ ನೆಟ್‌ವರ್ಕ್‌ಗೆ ಸೆಳೆಯಲು ಬಿಎಸ್‌ಎನ್‌ಎಲ್ ಈ ಕೊಡುಗೆ ಜಾರಿಗೆ ತಂದಿದೆ. ಉಚಿತ ಕರೆಗಳ ಜೊತೆಗೆ.. ದಿನಕ್ಕೆ 1 ಜಿಬಿ ಹೈ-ಸ್ಪೀಡ್ ಇಂಟರ್ನೆಟ್ ಸಹ ಈ ಯೋಜನೆಯಲ್ಲಿ ಸೇರುತ್ತದೆ. ಅಷ್ಟೇ ಅಲ್ಲದೇ ನೀವು ದಿನಕ್ಕೆ 100 ಉಚಿತ ಎಸ್‌ಎಂಎಸ್‌ಗಳನ್ನು ಕಳುಹಿಸಬಹುದು. ಈ ಯೋಜನೆ 24 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ..
ಅಕ್ಟೋಬರ್ 12 ರ ಮೊದಲು ಹೊಸ ಸಿಮ್ ಖರೀದಿಸುವ ಮೊಬೈಲ್ ಬಳಕೆದಾರರಿಗೆ ಈ ಪ್ಲಾನ್ ಲಭ್ಯ. ಅದರ ನಂತರ ಈ ಸೇವೆ ಇರೋದಿಲ್ಲ. ಒಂದು ವೇಳೆ ನೀವೇನಾದರೂ ಈ ಸೇವೆಯನ್ನ ಪಡೆಯಬೇಕು ಎಂದು ಹತ್ತಿರದ ಬಿಎಸ್‌ಎನ್‌ಎಲ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಪ್ರಯೋಜನ ಪಡೆಯಬಹುದು. ಅಲ್ಲದೇ ಅಧಿಕೃತ ಚಿಲ್ಲರೆ ವ್ಯಾಪಾರಿಯಲ್ಲಿಯೂ ಲಭ್ಯವಿದೆ.
ಸಿಮ್ ಖರೀದಿಸುವಾಗ ಆಧಾರ್ ಮತ್ತು ನಿಮ್ಮ ಕೆವೈಸಿ ವಿವರಗಳನ್ನು ನೀಡಿದರೆ ಸಿಮ್ ಸಕ್ರಿಯಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಬಿಎಸ್‌ಎನ್‌ಎಲ್ ಟೋಲ್-ಫ್ರೀ ಸಂಖ್ಯೆ 1800-180-1503 ಅಥವಾ ಬಿಎಸ್‌ಎನ್‌ಎಲ್ ನ್ಯೂ ಸೆಲ್ಫ್ ಕೇರ್ ಅಪ್ಲಿಕೇಶನ್‌ಗೆ ಕರೆ ಮಾಡಿ. ಇನ್ನು ಬಿಎಸ್‌ಎನ್‌ಎಲ್ ತನ್ನ ವಿಶೇಷ ಆಫರ್ ಬಗ್ಗೆ ಟ್ವಿಟರ್‍ನಲ್ಲಿ ಮಾಹಿತಿಯನ್ನ ಹಂಚಿಕೊಂಡಿದೆ.
ಇಂಟರ್ನೆಟ್ ಕೂಡ..
BSNL ಹೊಸ ಗ್ರಾಹಕರನ್ನು ಆಕರ್ಷಿಸಲು ಹೀಗೆ ಮಾಡುತ್ತಿದೆ. ಈಗಾಗಲೇ ಇತರೆ ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಬೆಲೆಗಳನ್ನು ಹೆಚ್ಚಿಸಿವೆ. ಆದರೆ BSNL ನ ರೀಚಾರ್ಜ್ ಬೆಲೆಗಳು ತುಂಬಾ ಕಡಿಮೆ. ಅನೇಕರು BSNLಗೆ ಪೋರ್ಟ್ ಮಾಡಿಸಿಕೊಳ್ಳಲು ಆಸಕ್ತಿ ಹೊಂದಿದ್ದಾರೆ. ಅಂತಹ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಅನೇಕ ಕೊಡುಗೆಗಳನ್ನು ತಂದಿದೆ. ಇದು ಹೊಸ ಸಿಮ್ ಖರೀದಿದಾರರಿಗೆ ಅಗ್ಗದ ಬೆಲೆಯಲ್ಲಿ ಪ್ಲಾನ್ ತರುತ್ತದೆ.


