ನವದೆಹಲಿ(ಜ.14): ಪ್ರಧಾನಿ ಮೋದಿ ಅವರನ್ನು ಆಧುನಿಕ ಶಿವಾಜಿ ಎಂದು ಬಣ್ಣಸಿದ್ದ 'ಆಜ್ ಕಾ ಶಿವಾಜಿ'(ಇಂದಿನ ಶಿವಾಜಿ-ನರೇಂದ್ರ ಮೋದಿ)ಪುಸ್ತಕವನ್ನು ಬಿಜೆಪಿ ಮುಖಂಡ ಜೈ ಭಗವಾನ್ ಗೋಯಲ್ ಹಿಂಪಡೆದಿದ್ದು, ಪ್ರಮಾದಕ್ಕೆ ಕ್ಷಮೆಯಾಚಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಮೋದಿ ಅವರನ್ನು ಶಿವಾಜಿ ಮಹಾರಾಜರಿಗೆ ಹೋಲಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 'ಆಜ್ ಕಾ ಶಿವಾಜಿ'ಪುಸ್ತಕವನ್ನು ಹಿಂಪಡೆಯಲಾಗಿದೆ ಎಂದು ಲೇಖಕ ಜೈ ಭಗವಾನ್ ಗೋಯಲ್ ತಿಳಿಸಿದ್ದಾರೆ.

ಇನ್ನು ವಿವಾದಿತ ಪುಸ್ಕತ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಪುಸ್ತಕಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಪುಸ್ತಕದ ಲೇಖಕ ಕೂಡ ಕ್ಷಮೆ ಕೋರಿರುವುದರಿಂದ ವಿವಾದ ಅಂತ್ಯ ಕಂಡಿದೆ ಎಂದು ಜಾವಡೇಕರ್ ಹೇಳಿದ್ದಾರೆ.

ಶಿವಾಜಿ ಮಹಾರಾಜರು ಅತ್ಯಂತ ಮಹನೀಯರು. ಅವರಿಗೆ ಬೇರೆ ಯಾರೂ ಸಮಾನರಲ್ಲ ಎಂದು ಜಾವಡೇಕರ್ ಟ್ವೀಟ್ ಮಾಡಿದ್ದಾರೆ. ಮೋದಿ ಅವರನ್ನು ಶಿವಾಜಿ ಮಹಾರಾಜರಿಗೆ ಹೋಲಿಕೆ ಮಾಡಿದ್ದು ಸರಿಯಲ್ಲ ಎಂದೂ ಜಾವಡೇಕರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಶಿವಾಜಿ ಮಹಾರಾಜರಿಗೆ ಹೋಲಿಕೆ ಮಾಡಿದ್ದನ್ನು ತೀವ್ರವಾಗಿ ವಿರೋಧಿಸಿದ್ದ ಶಿವಸೇನೆ, ಪುಸ್ತಕವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.