ಉಚಿತ ಗ್ಯಾರೆಂಟಿ ಯೋಜನೆಗಳಿಂದ ಕಂಗಾಲಾಗಿರುವ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ ಇದೀಗ ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸಲುು ದೇವಸ್ಥಾನದ ಹುಂಡಿಗೆ ಕೈ ಹಾಕಿದೆ. ಇದು ಭಾರಿ ಆಕ್ರೋಶಕ್ಕೆ ಕಾರಣಾಗಿದೆ.

ಹಿಮಾಚಲ ಪ್ರದೇಶ(ಫೆ.28) ಉಚಿತ ಗ್ಯಾರೆಂಟಿ ಯೋಜನೆ ಜಾರಿಗೊಳಿಸಿರುವ ಹಿಮಾಚಲ ಪ್ರದೇ ಕಾಂಗ್ರೆಸ್ ಸರ್ಕಾರ ಇದೀಗ ಹಣ ಹೊಂದಿಸಲು ಹೆಣಗಾಡುತ್ತಿದೆ ಅನ್ನೋ ವರದಿಗಳು ಬಯಲಾಗಿದೆ. ಕಾಂಗ್ರೆಸ್‌ನ ಉಚಿತ ಗ್ಯಾರೆಂಟಿಗೆ ಭಾರಿ ಹಣ ಖರ್ಚಾಗುತ್ತಿದೆ. ಇದರ ನಡುವೆ ಪ್ರವಾಹ, ಭೂಕುಸಿತ ಸೇರಿದಂತೆ ಪ್ರಾಕೃತಿಕ ವಿಕೋಪದಿಂದ ಹಿಮಾಚಲ ಕಾಂಗ್ರೆಸ್ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದ ಬಹುತೇಕ ಎಲ್ಲಾ ಮಾರ್ಗಗಳು ಅಂತ್ಯಗೊಂಡಿದೆ. ಇದೀಗ ಕೊನೆಯದಾಗಿ ಹಿಂದೂ ದೇವಸ್ಥಾನದ ಹುಂಡಿಗೆ ಕೈ ಹಾಕಿದೆ. ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ದೇವಸ್ಥಾನಗಳು ದೇಣಿಗೆ ನೀಡುವಂತೆ ಕಾಂಗ್ರೆಸ್ ಸರ್ಕಾರ ಪತ್ರ ಬರೆದಿದೆ. ಸರ್ಕಾರದ ಆಡಳಿತದಲ್ಲಿರುವ ದೇವಸ್ಥಾನಗಳಿಗೆ ನೀಡಿರುವ ಈ ಪತ್ರ ಇದೀಗ ಕೋಲಾಹಲ ಸೃಷ್ಟಿಸಿದೆ.

ಹಿಮಾಚಲ ಪ್ರದೇಶದಲ್ಲಿ ಅತ್ಯಂತ ಪ್ರಸಿದ್ಧ ಹಾಗೂ ಪವಿತ್ರ ಹಿಂದೂ ಧಾರ್ಮಿಕ ಕೇಂದ್ರಗಳಿವೆ. ಈ ಎಲ್ಲಾ ಕ್ಷೇತ್ರಗಳು ಹಿಮಾಚಲ ಪ್ರದೇಶ ಮುಜರಾಯಿ ಇಲಾಖೆ ಆಡಳಿತಕ್ಕೊಳಪಟ್ಟಿದೆ. ಇದೀಗ ಸರ್ಕಾರ ಈ ದೇವಸ್ಥಾನಗಳಿಗೆ ಸುತ್ತೋಲೆ ಹೊರಡಿಸಿದೆ. ಮುಖ್ಯಮಂತ್ರಿ ಸುಖ ಆಶ್ರಯ ಹಾಗೂ ಮುಖ್ಯಮಂತ್ರಿ ಸುಖ ಶಿಕ್ಷಾ ಯೋಜನೆಗೆ ಹಣ ಹೊಂದಿಸುವಂತೆ ದೇವಸ್ಥಾನಗಳಿಗೆ ಪತ್ರ ಬರೆದಿದೆ. ದೇವಸ್ಥಾನದ ಟ್ರಸ್ಟ್ ಸರ್ಕಾರದ ಯೋಜನೆಗಳಿಗೆ ದೇಣಿಗೆ ನೀಡುವಂತೆ ಸುತ್ತೋಲೆಯಲ್ಲಿ ಸೂಚಿಸಿದೆ.

ಸರ್ಕಾರದ ಅಧೀನದಲ್ಲಿರುವ ಹಿಂದೂ ದೇವಸ್ಥಾನಗಳು ಕಡ್ಡಾಯವಾಗಿ ದೇಣಿಗೆ ನೀಡುವಂತೆ ಸೂಚಿಸಲಾಗಿದೆ. ಇದು ಹಿಮಾಚಲ ಪ್ರದೇಶದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಹಿಮಾಚಲ ಪ್ರದೇಶದ ವಿಪಕ್ಷ ಹಾಗೂ ಬಿಜೆಪಿ ಈ ನಡೆಯನ್ನು ಖಂಡಿಸಿದೆ. ಹಿಮಾಚಲ ಪ್ರದೇಶದಲ್ಲಿ ಇದುವರೆಗೆ ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ದೇವಸ್ಥಾನದ ಟ್ರಸ್ಟ್‌ನಿಂದ ಹಣ ಪಡೆಯುವ ಪದ್ಧತಿ ಇರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರ ದೇವಸ್ಥಾನದ ಹುಂಡಿಗೆ ಕೈಹಾಕಿದೆ. ಉಚಿತ ಗ್ಯಾರೆಂಟಿಯಿಂದ ರಾಜ್ಯದ ಖಜಾನೆ ಖಾಲಿಯಾಗಿದೆ. ಸಾಲ ವಿಪರೀತವಾಗಿದೆ. ಇದೀಗ ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂ ದೇವಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಇದಕ್ಕೆ ಮುಖ್ಯಮಂತ್ರಿ ಸುಖ ಆಶ್ರಯ ಹಾಗೂ ಸುಖ ಶಿಕ್ಷಣ ಹೆಸರಿನಡಿ ವಸೂಲಿ ಮಾಡಲಾಗುತ್ತಿದೆ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.

ಈ ಕುರಿತು ಮಾತನಾಡಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಜೈರಾಮ ಠಾಕೂರ್, ಆತಂಕ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಹೊರಡಿಸುವ ಸುತ್ತೋಲೆಯಲ್ಲಿ, ಲಭ್ಯವಿರುವ ಎಲ್ಲಾ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಲು ಖಡಕ್ ವಾರ್ನಿಂಗ್ ನೀಡಿದೆ. ದೇವಸ್ಥಾನ ಟ್ರಸ್ಟ್‌ಗಳಲ್ಲಿರುವ ಎಲ್ಲಾ ಹಣವನ್ನು ಸರ್ಕಾರಕ್ಕೆ ನೀಡಲು ಸೂಚಿಸಿದೆ ಎಂದು ಜೈರಾಮ್ ಠಾಕೂರ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕರು, ಅಧ್ಯಕ್ಷರು ಸೇರಿದಂತೆ ಹಲವರು ಹಿಂದೂ ಧರ್ಮವನ್ನು ಅವಮಾನಿಸುತ್ತಾರೆ. ಸನಾತನ ಧರ್ಮವನ್ನು ಅಪಮಾನಿಸುತ್ತಾರೆ. ಮತ್ತೊಂದೆಡೆಯಿಂದ ಹಿಂದೂ ದೇವಸ್ಥಾನಗಳ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಜೈರಾಮ್ ಠಾಕೂರ್ ಆರೋಪಿಸಿದ್ದಾರೆ. ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ತನ್ನ ಉಚಿತ ಗ್ಯಾರೆಂಟಿ ಯೋಜನೆಗಳಿಂದ ಸಾಲದಲ್ಲಿ ಮುಳುಗಿದೆ. ಇದಕ್ಕಾಗಿ ಹಿಂದೂ ಮಂದಿರದ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.