ನವದೆಹಲಿ [ಜ.03]: ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಯನ್ನು ಪ್ರತಿಷ್ಠೆಯ ವಿಷಯವಾಗಿಸಿಕೊಂಡಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಚುನಾವಣೆಯನ್ನು ಗೆದ್ದೇ ತೀರುವ ಹಟದಲ್ಲಿ ಇದೀಗ ಬಂಗಾಳಿ ಮತ್ತು ತಮಿಳು ಭಾಷೆಯನ್ನು ಕಲಿಯಲು ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

ಚುನಾವಣಾ ರಣತಂತ್ರಗಳಿಗೆ ಹೆಸರಾಗಿರುವ ಅಮಿತ್‌ ಶಾ, ಕಳೆದ ಲೋಕಸಭಾ ಚುನಾವಣೆ ವೇಳೆ ಬಂಗಾಳದಲ್ಲಿ ಮ್ಯಾಜಿಕ್‌ ಮಾಡುವಲ್ಲಿ ಯಶಸ್ವಿಯಾಗಿದ್ದರು. 2014ರಲ್ಲಿ ರಾಜ್ಯದ 42 ಸ್ಥಾನಗಳ ಪೈಕಿ 2 ಮಾತ್ರ ಗೆದ್ದಿದ್ದ ಬಿಜೆಪಿ, 2019ರ ಲೋಕಸಭಾ ಚುನಾವಣೆಯಲ್ಲಿ 18 ಸ್ಥಾನ ಗೆಲ್ಲುವಂತೆ ಮಾಡಿದ್ದರಲ್ಲಿ ಶಾ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ತದನಂತರದಲ್ಲಿ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್‌ ಚುನಾವಣೆಯಲ್ಲಿ ಪಕ್ಷ ಸೋಲನ್ನಪ್ಪಿದ್ದು, ಬಿಜೆಪಿ ಚಾಣಕ್ಯನ ಹಿರಿಮೆಗೆ ಸ್ವಲ್ಪ ಕುಂದುಂಟು ಮಾಡಿದೆ. ಹೀಗಾಗಿ ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಅನ್ನು ಸೋಲಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಗುರಿ ಹಾಕಿಕೊಂಡಿರುವ ಶಾ, ಈ ನಿಟ್ಟಿನಲ್ಲಿ ಈಗಾಗಲೇ ಬಂಗಾಳಿ ಭಾಷೆ ಕಲಿಯಲು ಆರಂಭಿಸಿದ್ದಾರೆ. ಇದರ ಜೊತೆಗೆ ತಮಿಳು ಸೇರಿದಂತೆ ಇತರೆ 3 ಭಾಷೆಯನ್ನು ಕಲಿಯಲು ಆರಂಭಿಸಿದ್ದಾರೆ. ಇದಕ್ಕಾಗಿ ಶಿಕ್ಷಕರನ್ನೂ ನೇಮಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೇದಿಕೆಯಲ್ಲೇ 50 ಸಾವಿರ ಕೋಟಿ ಕೇಳಿದ ಬಿಎಸ್‌ವೈಗೆ ಮೋದಿಯಿಂದ ಸಿಕ್ಕ ಉತ್ತರ!...

ಅಲ್ಲದೆ, ಶಾಸ್ತ್ರೀಯ ಸಂಗೀತವನ್ನೂ ಕಲಿತಿರುವ ಅವರು, ಸದಾ ಬಿಡುವಿಲ್ಲದ ಚಟುವಟಿಕೆಯ ಒತ್ತಡ ನೀಗಲು ಸಂಗೀತಾಭ್ಯಾಸವನ್ನೂ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬಂಗಾಳಿ, ತಮಿಳು ಏಕೆ?: ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ತಮ್ಮ ಚುನಾವಣಾ ಪ್ರಚಾರ ಭಾಷಣಗಳಲ್ಲಿ ‘ಮಾ, ಮಾಟಿ, ಮಾನುಷ್‌’ (ತಾಯಿ, ತಾಯ್ನಾಡು ಮತ್ತು ಜನರ) ಘೋಷಣೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಮೂಲಕ ಬಂಗಾಳಿ ಅಸ್ಮಿತೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅಲ್ಲದೆ ಅಮಿತ್‌ ಶಾರನ್ನು ಹೊರಗಿನ ವ್ಯಕ್ತಿ ಎಂದು ಬಿಂಬಿಸುವ ಯತ್ನ ಮಾಡುತ್ತಿದ್ದಾರೆ.

ಹೀಗಾಗಿ ಚುನಾವಣಾ ಪ್ರಚಾರದ ವೇಳೆ ಬಂಗಾಳದಲ್ಲೇ ಮಾತನಾಡಿದರೆ ಜನರನ್ನು ಹೆಚ್ಚು ಸುಲಭವಾಗಿ ತಲುಪಬಹುದು. ಇದಕ್ಕಾಗಿ ಬಂಗಾಳಿ ಕಲಿಯುವುದು ಅಗತ್ಯ ಎನ್ನುವ ನಿರ್ಧಾರಕ್ಕೆ ಶಾ ಬಂದಿದ್ದಾರೆ ಎನ್ನಲಾಗಿದೆ. ಅಲ್ಲದೆ ಸ್ಥಳೀಯ ಭಾಷೆ ಕಲಿಯುವುದು, ಸ್ಥಳೀಯರ ಅಭಿಪ್ರಾಯ ಸಂಗ್ರಹ ಮತ್ತು ಚುನಾವಣೆ ರಣತಂತ್ರ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ಶಾ ಅಂಬೋಣ.

ಇನ್ನು ಪಶ್ಚಿಮ ಬಂಗಾಳದಂತೆ ತಮಿಳುನಾಡಿನಲ್ಲೂ ಮುಂದಿನ ವರ್ಷ ವಿಧಾನಸಭಾ ಚುನಾವಣೆಯ ನಡೆಯಲಿದೆ. ಅಲ್ಲಿ ಬಿಜೆಪಿಗೆ ಎಐಎಡಿಎಂಕೆ ಮಿತ್ರ ಪಕ್ಷ. ಆದರೆ ವಿಪಕ್ಷಗಳಾದ ಡಿಎಂಕೆ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ತಮಿಳು ಅಸ್ಮಿತೆಗೆ ಹೆಚ್ಚು ಒತ್ತು ನೀಡುತ್ತಿವೆ. ಜೊತೆಗೆ ಡಿಎಂಕೆ ಮತ್ತು ಎಐಎಡಿಎಂಕೆ ಹೊರತುಪಡಿಸಿ ಬೇರೆ ಪಕ್ಷಗಳನ್ನು ವಿಧಾನಸಭೆಯಲ್ಲಿ ಅಧಿಕಾರಕ್ಕೆ ತಂದ ಉದಾಹರಣೆ ರಾಜ್ಯದಲ್ಲಿಲ್ಲ. ಹೀಗಾಗಿ ಆ ಭಾಷೆಯನ್ನೂ ಕಲಿತು ಜನರ ಗಮನ ಸೆಳೆಯಲು ಶಾ ಯೋಜಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆಯೊಂದು ವರದಿ ಮಾಡಿದೆ.