ಕೋಲ್ಕತಾ(ಜ.21): ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಬಿಜೆಪಿ ಮತ್ತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ನಾಯಕ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿಯನ್ನು ಆಡಳಿತದಿಂದ ಕಿತ್ತೊಗೆದು ಸರ್ಕಾರ ರಚಿಸಲು ಬಿಜೆಪಿ ಲೆಕ್ಕಾಚಾರ ಹಾಕುತ್ತಿರುವಾಗಲೇ, ನೀವು ಕುಡಿಯಲು ಹಾಲು ಕೇಳಿದರೆ ನಾವು ಪಾಯಸವನ್ನೇ ಕೊಡುತ್ತೇವೆ. ಆದರೆ ಬಂಗಾಳ ಕೇಳಲು ಬಂದರೆ ಛಿದ್ರ ಮಾಡುವುದಾಗಿ ಟಿಎಂಸಿ ಮುಖಂಡನೋರ್ವ ಬಿಜೆಪಿಗೆ ಬಹಿರಂಗ ಬೆದರಿಕೆ ಹಾಕಿದ್ದಾರೆ.

ಹೌರಾದಲ್ಲಿ ಪಕ್ಷದ ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಟಿಎಂಸಿ ಮುಖಂಡ ಮದನ್‌ ಮಿತ್ರಾ, ‘ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ವಿಧಾನಸಭೆ ಕ್ಷೇತ್ರದಲ್ಲಿ ಎದುರಾಳಿ ವಿರುದ್ಧ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸದಿದ್ದರೆ ತಮ್ಮ ಮೊಣಕೈಯನ್ನು ಸೀಳಿಕೊಳ್ಳುವುದಾಗಿ’ ಸವಾಲು ಹಾಕಿದ್ದಾರೆ. ಈ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರನ್ನು 50 ಸಾವಿರ ಮತಗಳ ಅಂತರದಿಂದ ಸೋಲಿಸುವುದಾಗಿ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಘೋಷಿಸಿದ್ದರು. ಇದರ ಬೆನ್ನಲ್ಲೇ, ಟಿಎಂಸಿ ಮುಖಂಡನ ಈ ಹೇಳಿಕೆ ಹೊರಬಿದ್ದಿದೆ.

ಏತನ್ಮಧ್ಯೆ, ಟಿಎಂಸಿ ಮಾಜಿ ಶಾಸಕ ಅರಿಂದಮ್‌ ಭಟ್ಟಾಚಾರ್ಯ ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.