ಪಟನಾ(ನ.03): ಬಿಹಾರ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ ಮಂಗಳವಾರ ನಡೆಯಲಿದೆ. ಈ ಹಂತದಲ್ಲಿ 94 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ವಿವಿಧ ಪಕ್ಷಗಳ ಒಟ್ಟು 1463 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಈ ಪೈಕಿ ವಿಪಕ್ಷ ಆರ್‌ಜೆಡಿ ನಾಯಕ, ಲಾಲುಯಾದವ್‌ ಪುತ್ರ ತೇಜಸ್ವಿ ಯಾದವ್‌, ನಿತೀಶ್‌ ಸರ್ಕಾರದ ನಾಲ್ವರು ಸಚಿವರು, ನಟ ಶತ್ರುಘ್ನ ಸಿನ್ಹಾರ ಪುತ್ರ, ಕಾಂಗ್ರೆಸ್‌ನ ಲವ್‌ ಸಿನ್ಹಾ ಕಣದಲ್ಲಿದ್ದಾರೆ. ಹೀಗಾಗಿ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ಮುಖ್ಯಮಂತ್ರಿ ನಿತೀಶ್‌ ತವರು ನಳಂದಾ ಜಿಲ್ಲೆ ವ್ಯಾಪ್ತಿಗೆ ಬರುವ 7 ವಿಧಾನಸಭೆಗೂ ಚುನಾವಣೆ ನಡೆಯುತ್ತಿದೆ. ಹೀಗಾಗಿ ಈ ಹಂತ ನಿತೀಶ್‌ ಪಾಲಿಗೂ ಅಗ್ನಿಪರೀಕ್ಷೆಯಾಗಿದೆ.

ರಾಜ್ಯವಿಧಾನಸಭೆ 243 ಸ್ಥಾನಗಳ ಪೈಕಿ ಅ.28ರಂದು 71 ವಿಧಾನಸಭೆ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದಿತ್ತು. ಇದರಲ್ಲಿ ಶೇ. 53.46ರಷ್ಟುಪ್ರಮಾಣದ ಮತದಾನವಾಗಿತ್ತು. ನ.7ರಂದು 78 ಸ್ಥಾನಗಳಿಗೆ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.