ಅರ್ಜುನನ ಬಾಣದಲ್ಲಿ ನ್ಯೂಕ್ಲಿಯರ್ ಪವರ್: ಬಂಗಾಳ ಗರ್ವನರ್!
ಅರ್ಜುನನ ಬಾಣದಲ್ಲಿ ಪರಮಾಣು ಶಕ್ತಿ ಇತ್ತಂತೆ| ಪ.ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್ ಅಭಿಪ್ರಾಯ| 45ನೇ ಪೂರ್ವ ಭಾರತ ವಿಜ್ಞಾನ ಮೇಳದಲ್ಲಿ ಧನ್ಕರ್ ವಿವಾದಾತ್ಮಕ ಹೇಳಿಕೆ| ‘ರಾಮಾಯಣ ಸಮಯದಲ್ಲಿ ಹಾರುವ ವಿಮಾನಗಳು ಅಸ್ತಿತ್ವದಲ್ಲಿದ್ದವು’| ಜಗದೀಪ್ ಧನ್ಕರ್ ಹೇಳಿಕೆಗೆ ವಿಜ್ಞಾನ ಸಮುದಾಯದ ತೀವ್ರ ವಿರೋಧ|
ಕೋಲ್ಕತ್ತಾ(ಜ.15): ಮಹಾಭಾರತದ ಧೀರ ಯೋಧ ಅರ್ಜುನನ ಬಾಣದಲ್ಲಿ ಪರಮಾಣು ಶಕ್ತಿ ಇತ್ತು ಎಂದು ಹೇಳುವ ಮೂಲಕ ಪ.ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್ ವಿವಾದ ಸೃಷ್ಟಿಸಿದ್ದಾರೆ.
45ನೇ ಪೂರ್ವ ಭಾರತ ವಿಜ್ಞಾನ ಮೇಳ ಉದ್ಘಾಟಿಸಿ ಮಾತನಾಡಿದ ಜಗದೀಪ್ ಧನ್ಕರ್, ರಾಮಾಯಣ ಸಮಯದಲ್ಲಿ ಹಾರುವ ವಿಮಾನಗಳು ಅಸ್ತಿತ್ವದಲ್ಲಿದ್ದವು ಎಂದು ಹೇಳಿದ್ದಾರೆ.
ಅರ್ಜುನನ ಬಾಣಗಳಲ್ಲಿ ಪರಮಾಣು ಶಕ್ತಿ ಇದ್ದು, ಇದು ಯುದ್ಧದ ಸಮಯದಲ್ಲಿ ಕೌರವರ ವಿನಾಶಕ್ಕೆ ಕಾರಣವಾಯಿತು ಎಂದು ಜಗದೀಪ್ ಧನ್ಕರ್ ಅಭಿಪ್ರಾಯಪಟ್ಟಿದ್ದಾರೆ.
ದೃತರಾಷ್ಟ್ರನಿಗೆ ಮಹಾಭಾರತ ಯುದ್ಧದ ಸಂಪೂರ್ಣ ಚಿತ್ರಣವನ್ನು ಸಂಜಯ ಅರಮನೆಯಲ್ಲಿ ಕುಳಿತೇ ನೀಡಿದ್ದು ಕೂಡ ಭಾರತದ ವೈಜ್ಞಾನಿಕ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
ಇನ್ನು ವಿಜ್ಞಾನ ಮೇಳದ ವೇದಿಕೆಯಲ್ಲೇ ಜಗದೀಪ್ ಧನ್ಕರ್ ನಂಬಲಸಾಧ್ಯವಾದ ಹೇಳಿಕೆ ನೀಡಿರುವುದನ್ನು ವಿಜ್ಞಾನ ಸಮುದಾಯ ಖಂಡಿಸಿದ್ದು, ರಾಜ್ಯಪಾಲರು ತರ್ಕಕ್ಕೆ ನಿಲುಕದ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.