ವಿವಿಧ ದೇಶಗಳ ಮುಖ್ಯಸ್ಥರು, ಜಗತ್ತಿನ ಖ್ಯಾತ ಐಟಿ, ಎಐ ಕಂಪನಿಗಳು ಭಾಗಿಯಾಗಿರುವ ದೆಹಲಿಯ ಜಾಗತಿಕ ಎಐ ಶೃಂಗದ ವೇಳೆ ಕಾಂಗ್ರೆಸ್‌ ಕಾಯರ್ತಕರ್ತರ ಗುಂಪೊಂದು ಶರ್ಟ್‌ ಬಿಟ್ಟಿ ಬನಿಯನ್‌ನಲ್ಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣ ಕೂಗಿದ ಘಟನೆ ಶುಕ್ರವಾರ ಇಲ್ಲಿ ನಡೆದಿದೆ.

ನವದೆಹಲಿ: ವಿವಿಧ ದೇಶಗಳ ಮುಖ್ಯಸ್ಥರು, ಜಗತ್ತಿನ ಖ್ಯಾತ ಐಟಿ, ಎಐ ಕಂಪನಿಗಳು ಭಾಗಿಯಾಗಿರುವ ದೆಹಲಿಯ ಜಾಗತಿಕ ಎಐ ಶೃಂಗದ ವೇಳೆ ಕಾಂಗ್ರೆಸ್‌ ಕಾಯರ್ತಕರ್ತರ ಗುಂಪೊಂದು ಶರ್ಟ್‌ ಬಿಟ್ಟಿ ಬನಿಯನ್‌ನಲ್ಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣ ಕೂಗಿದ ಘಟನೆ ಶುಕ್ರವಾರ ಇಲ್ಲಿ ನಡೆದಿದೆ. ಜಾಗತಿಕ ಸಮುದಾದ ಹಾಜರಿದ್ದ ಸಮಾರಂಭವೊಂದನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡ ಕಾಂಗ್ರೆಸ್‌ ಕಾರ್ಯಕರ್ತರ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೊಂದು ಆಕಸ್ಮಿಕ ಘಟನೆಯಲ್ಲ. ದೇಶದ ಇಮೇಜ್‌ಗೆ ಧಕ್ಕೆ ತರಲು ರಾಹುಲ್‌ ಗಾಂಧಿ ಸೂಚನೆಯಂತೆ ನಡೆಸಿದ ಪೂರ್ವ ಯೋಜಿತ ಕೃತ್ಯ. ಇದು ದೇಶ ದ್ರೋಹಕ್ಕೆ ಸಮ ಎಂದು ಬೆಳವಣಿಗೆ ಕುರಿತು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ನಡುವೆ ಪ್ರತಿಭಟನೆ ನಡೆಸಿದ ನಾಲ್ವರನ್ನು ಬಂಧಿಸಿರುವ ಪೊಲೀಸರು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ದಿಢೀರ್‌ ಪ್ರತಿಭಟನೆ:

ಭಾರತ ಮಂಟಪಂನಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಗೆ ಶುಕ್ರವಾರ ಸಭಿಕರಂತೆ ಹಾಜರಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಏಕಾಏಕಿ ತಾವು ಘೋಷಣೆ ಕೂಗಲು ಆರಂಭಿಸಿತು. ಜೊತೆಗೆ ತಾವು ಧರಿಸಿದ್ದ ಶರ್ಟ್‌ ಕಳಚಿ ಒಳಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಫೋಟೋಗಳಿದ್ದ ಟೀ ಶರ್ಟ್‌ ಧರಿಸಿ, ‘ಅಮೆರಿಕದ ಜತೆ ಟ್ರೇಡ್‌ ಡೀಲ್‌, ಎಪ್‌ಸ್ಟೀನ್‌ ಫೈಲ್‌ ವಿಚಾರದಲ್ಲಿ ಮೋದಿ ರಾಜಿ ಮಾಡಿಕೊಂಡಿದ್ದಾರೆ’ ಎಂದು ಘೋಷಣೆಗಳನ್ನು ಕೂಗಿದ್ದಾರೆ.ಜೊತೆಗೆ, ‘ದೇಶದಲ್ಲಿ ಪ್ರಧಾನಿ ವಿರುದ್ಧ ಧ್ವನಿ ಎತ್ತಲು ಯಾವ ವೇದಿಕೆಯಿದೆ? ಬೀದಿಗಿಳಿದರೆ ನಮ್ಮನ್ನು ತಡೆಯುತ್ತಾರೆ. ಐಟಿ ನಿಯಮ ನೆಪದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕಿದರೆ ಡಿಲೀಸ್‌ ಮಾಡುತ್ತಾರೆ. ನಾವು ಶೃಂಗಸಭೆ ವಿರೋಧಿಸುವುದಿಲ್ಲ. ರಾಜಿ ಮಾಡಿಕೊಳ್ಳುವುದನ್ನು ವಿರೋಧಿಸುತ್ತೇವೆ’ ಎಂದು ಆಕ್ರೋಶ ಹೊರ ಹಾಕಿದರು.

10 ಮಂದಿ ವಶಕ್ಕೆ : 

ಈ ವೇಳೆ ಶೃಂಗದಲ್ಲಿ ಬಾಗವಹಿಸಿದ್ದವರು ಮತ್ತು ಪ್ರತಿಭಟನಾಕಾರರ ನಡುವೆ ಕೆಲ ಕಾಲ, ಮಾತಿನ ಚಕಮಕಿ ನಡೆಯಿತು. ಆಗ ಮಧ್ಯಪ್ರವೇಶಿಸಿ ಪೊಲೀಸರು ಯೂತ್‌ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಕೃಷ್ಣ ಹರಿ, ಬಿಹಾರ ರಾಜ್ಯ ಕಾರ್ಯದರ್ಶಿ ಕುಂದನ್‌ ಯಾದವ್‌, ಉತ್ತರ ಪ್ರದೇಶ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಅಜಯ್‌ ಕುಮಾರ್‌, ಯುವ ಕಾಂಗ್ರೆಸ್‌ ರಾಷ್ಟ್ರೀಯ ಸಹ ಸಂಚಾಲಕ ನರಸಿಂಹ ಯಾದವ್‌ ಸೇರಿ 15 ಮಂದಿಯನ್ನು ವಶಕ್ಕೆ ಪಡೆದರು. ಬಳಿಕ ಈ ಪೈಕಿ ನಾಲ್ವರನ್ನು ಬಂಧಿಸಲಾಗಿದೆ.

ಬಿಜೆಪಿ ಕಿಡಿ:ಕಾಂಗ್ರೆಸ್‌ ಕಾರ್ಯಕರ್ತರ ಈ ವರ್ತನೆ ಬಗ್ಗೆ ಬಿಜೆಪಿ ಮತ್ತು ಕೇಂದ್ರ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ತಲೆಯಿಲ್ಲದ, ನಾಚಿಕೆಗೇಡಿನ ಕೃತ್ಯ. ಇದೊಂದು ಪೂರ್ವಯೋಜಿತ, ಉದ್ದೇಶಪೂರ್ವಕ ಕೃತ್ಯ. ರಾಹುಲ್‌ ಮನೆಯಲ್ಲಿ ಸೋನಿಯಾ ಮತ್ತು ಪ್ರಿಯಾಂಕಾ ಉಪಸ್ಥಿತಿಯಲ್ಲೇ ಈ ಸಂಚು ರೂಪಿಸಲಾಗಿತ್ತು. ರಾಹುಲ್‌ ಮತ್ತು ಕಾಂಗ್ರೆಸ್‌ ಅತ್ಯುನ್ನತ ಮಟ್ಟದಲ್ಲಿ ದೇಶದ್ರೋಹಿಗಳು. ದೇಶ ಯಾವಾಗೆಲ್ಲಾ ಅಭಿವೃದ್ಧಿ ಸಾಧಿಸುತ್ತದೆಯೋ ಅಗೆಲ್ಲಾ ಇವರು ವಾತಾವರಣ ಹಾಳುಗೆಡವಲು ಏನಾದರೂ ಮಾಡಿಯೇ ತೀರುತ್ತಾರೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಕಿಡಿದ್ದಾರೆ.

ಇನ್ನು ಕೇಂದ್ರ ಸಚಿವ ಸಚಿವ ಶಿವರಾಜ್‌ಸಿಂಗ್‌ ಚೌಹಾಣ್‌ ಇದು ದೇಶ ದ್ರೋಹದ ಕೃತ್ಯ ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್‌ ಪಾಲಿಗೆ ದೇಶಕ್ಕಿಂತ ರಾಜಕೀಯ ಹೆಚ್ಚಾಯಿತೇ ಎಂಬುದನ್ನು ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಬೇಕು ಎಂದು ಚೌಹಾಣ್‌ ಒತ್ತಾಯಿಸಿದ್ದಾರೆ. ಇನ್ನು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಗುರಿ ಮಾಡಲು ಭಾರತದ ಇಮೇಜ್‌ಗೆ ದಕ್ಕೆ ತರುವುದು ಪ್ರತಿಪಕ್ಷದ ಉದ್ದೇಶವೇ’ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಪ್ರತಿಕ್ರಿಯಿಸಿ, ಭಾರತದ ಜಾಗತಿಕ ಮಟ್ಟದ ಪ್ರತಿಷ್ಠಿತ ಶೃಂಗ ಸಭೆ ಅಯೋಜಿಸಿರುವ ಕಾಂಗ್ರೆಸ್‌ ಘನತೆಯಿಂದ ಗದ್ದಲವನ್ನೇ ತನ್ನ ಆಯ್ಕೆ ಮಾಡಿಕೊಂಡಿತು. ಇದು ಜಾಗತಿಕ ಮಟ್ಟದಕ್ಕೆ ಭಾರತದ ಘನತೆಗೆ ಧಕ್ಕೆ ತರುವ ಯತ್ನ ಎಂದು ಆರೋಪಿಸಿದ್ದಾರೆ.

ಭಾರತಕ್ಕೆ ಕಳಂಕ ತರುವ ಯತ್ನ

ಎಐ ಶೃಂಗಸಭೆಯ ಸ್ಥಳದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಅನುಚಿತವಾಗಿ ವರ್ತಿಸಿ ಗದ್ದಲ ಸೃಷ್ಟಿಸಿದ್ದಾರೆ. ಇದು ನಾಚಿಕೆಕೇಡು. ದುರದೃಷ್ಟಕರ ಮಾತ್ರವಲ್ಲದೇ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತಕ್ಕೆ ಕಳಂಕ ತರುವ ಪ್ರಯತ್ನವೂ ಆಗಿದೆ. ಕಾಂಗ್ರೆಸ್‌ನ ಈ ಕೃತ್ಯವನ್ನು ಖಂಡಿಸುತ್ತೇನೆ.

- ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

ದೇಶದ್ರೋಹದ ಕೃತ್ಯ

ಇದು ದೇಶ ದ್ರೋಹದ ಕೃತ್ಯ. ಕಾಂಗ್ರೆಸ್‌ ಪಾಲಿಗೆ ದೇಶಕ್ಕಿಂತ ರಾಜಕೀಯ ಹೆಚ್ಚಾಯಿತೇ ಎಂಬುದನ್ನು ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಬೇಕು. ದೇಶದ ಜನತೆ ಇಡೀ ಘಟನೆಯನ್ನು ವೀಕ್ಷಿಸಿದ್ದಾರೆ. ಅವರಿಗೆ ಉತ್ತರ ನೀಡುವ ಹೊಣೆ ಕಾಂಗ್ರೆಸ್‌ ನಾಯಕರ ಮೇಲಿದೆ.

ಶಿವರಾಜ್‌ ಸಿಂಗ್‌ ಚೌಹಾಣ್‌, ಕೇಂದ್ರ ಸಚಿವ

ದೊಡ್ಡ ಕಾರ್ಯಕ್ರಮದಲ್ಲಿ ಸಣ್ಣ ಲೋಪ ಸಹಜ: ಕೈ ಟೀಕಿಸಿದ್ದ ಶೃಂಗ ಶ್ಲಾಘಿಸಿದ ತರೂರ್‌

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಜಾಗತಿಕ ಶೃಂಗಸಭೆಯ ಕೆಲ ಸಣ್ಣಪುಟ್ಟ ದೋಷಗಳ ಬಗ್ಗೆ ಕಾಂಗ್ರೆಸ್‌ ಕಿಡಿಕಾರಿದ್ದರೆ, ಅವರದ್ದೇ ಪಕ್ಷದ ಸಂಸದ ಶಶಿ ತರೂರ್‌, ಶೃಂಗವನ್ನು ಹೊಗಳಿದ್ದಾರೆ. ಆರಂಭದ ದಿನಗಳು ಬಹಳ ಅದ್ಭುತವಾಗಿತ್ತು. ಕೆಲವೊಂದು ದೋಷಗಳಿವೆ. ಅದರೆ ದೊಡ್ಡ ಕಾರ್ಯಕ್ರಮದಲ್ಲಿ ಇದೆಲ್ಲವೂ ಸಹಜ. ಎಐ ಅಭಿವೃದ್ಧಿಯಲ್ಲಿ ಹೊಸದಾಗಿ ಜಗತ್ತನ್ನು ಕಾಣಬೇಕೆಂಬ ಸಂದೇಶದೊಂದಿಗೆ ಅಧ್ಯಕ್ಷರು ಪ್ರಧಾನಮಂತ್ರಿಗಳು ಹಾಗೂ ವಿಶ್ವದ ನಾಯಕರು ಒಗ್ಗೂಡಿರುವುದು ಗಮನಾರ್ಹ’ ಎಂದಿದ್ದಾರೆ. ಶೃಂಗದ ಮೊದಲ ದಿನ ಜನಸಂದಣಿ, ಆಯೋಜನೆಯಲ್ಲಿ ಕೆಲ ಕೊರತೆ, ಗೋಲ್ಗಾಟಿಯಾ ವಿವಿಯ ಎಡವಟ್ಟು ಮೊದಲಾದ ವಿಷಯಗಳ ವಿಷಯದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.