ಬದಾಯೂಂ(ಜ.09): ಉತ್ತರ ಪ್ರದೇಶದ ಬದಾಯೂಂನಲ್ಲಿ 50 ವರ್ಷದ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಚಂದ್ರಮುಕ್ತಿ ದೇವಿ ಬೇಜಾವಾಬ್ದಾರಿಯುತ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಗುರುವಾರ ಸಂತ್ರಸ್ತೆ ಗ್ರಾಮಕ್ಕೆ ಭೇಟಿ ನೀಡಿದ ದೇವಿ, ‘ಸಂತ್ರಸ್ತ ಮಹಿಳೆ ಸಂಜೆ ಹೊತ್ತಲ್ಲಿ ಒಬ್ಬೊಂಟಿಯಾಗಿ ಮನೆಯಿಂದ ಹೊರಹೋಗದಿದ್ದರೆ ಅತ್ಯಾಚಾರ ನಡೆಯುತ್ತಿರಲಿಲ್ಲ. ಈ ಕೃತ್ಯ ಮಾನವ ಕುಲಕ್ಕೇ ಕಳಂಕ. ಆದರೆ ಮಹಿಳೆಯರು ಸಂಜೆ ವೇಳೆ ಒಬ್ಬೊಂಟಿಯಾಗಿ ಮನೆಯಿಂದ ಆಚೆ ಹೋಗದಂತೆ ನಾನು ಯಾವಾಗಲೂ ಹೇಳುತ್ತಿರುತ್ತೇನೆ’ ಎಂದು ಹೇಳಿದ್ದಾರೆ. ದೇವಿ ಅವರ ಈ ಬೇಜವಾಬ್ದಾರಿಯುತ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗಿದೆ.

ನಿರ್ಭಯಾ ಮಾದರಿ ಗ್ಯಾಂಗ್‌ರೇಪ್‌, ಕೊಲೆ

 

ಭಾನುವಾರ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆ ಬಹಳ ಹೊತ್ತಾದರೂ ಮನೆಗೆ ಮರಳಿರಲಿಲ್ಲ. ಬಳಿಕ ತಡರಾತ್ರಿ ವೇಳೆ ದೇವಸ್ಥಾನದ ಅರ್ಚಕ ಮಹಾಂತ ಬಾಬಾ ಸತ್ಯನಾರಾಯಣ, ಆತನ ಇಬ್ಬರು ಸಹಚರರರಾದ ವೇದರಾಂ ಮತ್ತು ಜೈಪಾಲ್‌ ಅವರು ಮಹಿಳೆಯ ದೇಹವನ್ನು ಆಕೆಯ ಮನೆಗೆ ತಂದು, ‘ನಿಮ್ಮ ತಾಯಿ ಪಾಳು ಬಾವಿಯೊಂದರಲ್ಲಿ ಬಿದ್ದಿದ್ದಳು. ಆಕೆಯ ದೇಹ ಎತ್ತಿಕೊಂಡು ಬಂದಿದ್ದೇವೆ’ ಎಂದು ಮಗನಿಗೆ ತಿಳಿಸಿ ಅಲ್ಲಿಂದ ಪರಾರಿಯಾಗಿದ್ದರು.

ಆದರೆ ಆರೋಪವನ್ನು ನಿರಾಕರಿಸಿದ ಸಂತ್ರಸ್ತೆಯ ಪುತ್ರ, ‘ದೇವಾಲಯಕ್ಕೆ ಮಹಿಳೆ ತೆರಳಿದ ಸಂದರ್ಭದಲ್ಲಿ ಅರ್ಚಕ ಹಾಗೂ ಆತನ ಸಹಚರರು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯನ್ನು ಚಿಕಿತ್ಸೆಗಾಗಿ ಚಂದೌಸಿ ಆಸ್ಪತ್ರೆಗೂ ಕರೆದೊಯ್ದಿದ್ದಾರೆ. ಚಿಕಿತ್ಸೆ ಫಲಿಸದೇ ಇದ್ದಾಗ ಬಾವಿಯಲ್ಲಿ ಬಿದ್ದು ಸತ್ತಳು ಎಂಬ ‘ಸುಳ್ಳು ಕತೆ’ ಕಟ್ಟಿಮನೆಗೆ ದೇಹ ಕೊಟ್ಟು ಹೋಗಿದ್ದಾರೆ’ ಎಂದು ಆರೋಪಿಸಿದ್ದಾನೆ.