ಗೂಗಲ್ ಮ್ಯಾಪ್ ನಂಬಿ ಆರೋಪಿ ಅರೆಸ್ಟ್ ಮಾಡಲು ಹೋಗಿ ತಾವೇ ಅರೆಸ್ಟ್ ಆದ ಪೊಲೀಸ್
ತಪ್ಪಿಸಿಕೊಂಡಿರುವ ಆರೋಪಿಯನ್ನು ಅರೆಸ್ಟ್ ಮಾಡಲು ಪೊಲೀಸರ ತಂಡ ಮಫ್ತಿಯಲ್ಲಿ ಕಾರ್ಯಾಚರಣೆಗೆ ಇಳಿದಿತ್ತು. ಮಾಹಿತಿ ಆಧಾರದ ಮೇಲೆ ಗೂಗಪ್ ಮ್ಯಾಪ್ ಬಳಸಿ ನೇರವಾಗಿ ಪ್ರಯಾಣ ಆರಂಭಿಸಿತ್ತು. ಆದರೆ ಗೂಗಲ್ ಮ್ಯಾಪ್ ನಂಬಿದ ಪೊಲೀಸರು ಯಾಮಾರಿದ್ದಾರೆ. ಅರೆಸ್ಟ್ ಮಾಡಲು ಹೋಗಿ ತಾವೆ ಅರೆಸ್ಟ್ ಆದ ಘಟನೆ ನಡೆದಿದೆ.
ಗೌವ್ಹಾಟಿ(ಜ.11) ಗೂಗಲ್ ಮ್ಯಾಪ್ ಹಲವರನ್ನು ಯಾಮಾರಿಸಿದೆ. ಇಲ್ಲದ ದಾರಿ ತೋರಿಸಿ ಹಲವು ಪ್ರಯಾಣಿಕರನ್ನೂ ಬಲಿ ಪಡೆದುಕೊಂಡಿದೆ. ಒಂದಷ್ಟು ಮಂದಿ ಕಾಡಿನಲ್ಲಿ ಕಳೆಯಬೇಕಾದ ಪರಿಸ್ಥಿತಿಯೂ ಬಂದಿದೆ. ಈ ಸಂದರ್ಬದಲ್ಲಿ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿ ಗೂಗಪ್ ಮ್ಯಾಪ್ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಈ ಬಾರಿ ಗೂಗಲ್ ಮ್ಯಾಪ್ ಪೊಲೀಸರನ್ನೇ ಯಾಮಾರಿಸಿದೆ. ಗೂಗಲ್ ಮ್ಯಾಪ್ ನಂಬಿ ಆರೋಪಿಯನ್ನು ಹಿಡಿಯಲು ಹೋದ ಪೊಲೀಸರೆ ಸಂಕಷ್ಟಕ್ಕೆ ಸಿಲುಕಿದ ಘಟನೆ ಅಸ್ಸಾಂ ಪೊಲೀಸರಿಗೆ ಆಗಿದೆ.
ಅಸ್ಸಾಂ ಜೋರ್ಹಟ್ ಜಿಲ್ಲಾ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದರು. ಹಲವು ಆರೋಪಿಗಳನ್ನು ಬಂಧಿಸಿದ್ದರು. ಈ ಪೈಕಿ ಮೋಸ್ಟ್ ವಾಂಟೆಡ್ ಆರೋಪಿ ತಪ್ಪಿಸಿಕೊಂಡಿದ್ದ. ಈತನನ್ನು ಹೇಗಾದರೂ ಮಾಡಿ ಹಿಡಿಯಲೇ ಬೇಕು ಎಂದು ಜೋರ್ಹಟ್ ಪೊಲೀಸರು ನಿರ್ಧರಿಸಿದ್ದಾರೆ. ತನಿಖೆ ಚುರುಕುಗೊಳಿಸಿದ್ದಾರೆ. ಇದರ ನಡುವೆ ತಪ್ಪಿಸಿಕೊಂಡಿರುವ ಆರೋಪಿ ಅಸ್ಸಾಂ ಗಡಿಯತ್ತ ತೆರಳಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಅಸ್ಸಾಂ ಗಡಿ ಜಿಲ್ಲೆಯಲ್ಲಿ ತಂಗಿರುವ ಮಾಹಿತಿ ಪಡೆದ ಪೊಲೀಸರು ಅರೆಸ್ಟ್ ಮಾಡಿ ಕರೆತರಲು ಸಜ್ಜಾಗಿದ್ದಾರೆ.
ಮೋಸ್ಟ್ ವಾಂಟೆಡ್ ಆಗಿರುವುದರಿಂದ ಜೋರ್ಹಟ್ ಜಿಲ್ಲಾ ಪೊಲೀಸರು 16 ಮಂದಿ ತಂಡ ರಚಿಸಲಾಗಿತ್ತು. ಪ್ರಮುಖ ಪೊಲೀಸ್ ಅಧಿಕಾರಿಗಳು ಈ ತಂಡದಲ್ಲಿದ್ದರು. ಪೊಲೀಸ್ ವಾಹನ, ಪೊಲೀಸ್ ಸಮವಸ್ತ್ರದಲ್ಲಿದ್ದರೆ ತಮ್ಮ ಆಗಮನವನ್ನು ಬೇರೆ ಯಾರಾದರೂ ಆತನಿಗೆ ಸೂಚಿಸಿದರೆ ಆರೋಪಿ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮುಫ್ತಿಯಲ್ಲಿ ತೆರಳಲು ನಿರ್ಧರಿಸಿದ್ದಾರೆ.ಜೊತೆಗೆ ಗನ್ ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಪೊಲೀಸರಿಗ ಶಸ್ತ್ರಾಸ್ತ್ರ ಅತ್ಯವಶ್ಯಕವಾಗಿದೆ. ಇತ್ತ ಬೇರೆ ವಾಹನ ಆಯ್ಕೆ ಮಾಡಿಕೊಂಡಿದ್ದಾರೆ. ಆರೋಪಿ ಅಡಗಿರುವು ಹಳ್ಳಿಯ ಮಾಹಿತಿ ಪಡೆದ ಪೊಲೀಸರು ಗೂಗಲ್ ಮ್ಯಾಪ್ ಸಹಾಯದಿಂದ ಪ್ರಯಾಣ ಆರಂಭಿಸಿದ್ದಾರೆ.
ಬೆಳಗ್ಗೆ ಪ್ರಯಾಣ ಆರಂಭಗೊಂಡಿದೆ. ಆರೋಪಿ ಅಡಗಿರುವ ಹಳ್ಳಿಯ ಮಾಹಿತಿ ಯಾವ ಪೊಲೀಸರಿಗೂ ಇರಲಿಲ್ಲ. ಇತ್ತ ಹಳ್ಳಿಗೆ ತೆರಳುವ ಮಾರ್ಗವೂ ಗೊತ್ತಿಲ್ಲ. ಹೀಗಾಗಿ ಗೂಗಲ್ ಮ್ಯಾಪ್ ಅನಿವಾರ್ಯವಾಗಿತ್ತು. ಗೂಗಲ್ ಮ್ಯಾಪ್ ಬಳಸಿ ಪ್ರಯಾಣ ಸಾಗಿದೆ. ಕೆಲ ಜಿಲ್ಲೆ, ಹಲವು ಹಳ್ಳಿ ದಾಟಿ ಪೊಲೀಸರು ಸಾಗಿದ್ದಾರೆ. ಪ್ರಯಾಣ ಸಾಗುತ್ತಾ ಸಂಜೆಯಾಗಿದೆ. ಹಳ್ಳಿಯೊಂದು ಎದುರಾಗಿದೆ. ಈ ಹಳ್ಳಿಯಲ್ಲಿ ಮಾಹಿತಿ ಕೇಳಲು ಕೆಲ ಪೊಲೀಸರು ಇಳಿದಿದ್ದಾರೆ. ಬಳಿಕ ಮಾಹಿತಿ ಕೇಳಿ ಮತ್ತೆ ವಾಹನ ಏರಿ ಕೆಲ ದೂರ ಹೋಗುವಷ್ಟರಲ್ಲಿ ಅಲ್ಲಿನ ಸ್ಥಳೀಯರು ಪೊಲೀಸರ ವಾಹನ ಸುತ್ತಿವರಿದಿದ್ದಾರೆ.
ನಾಗರೀಕರಂತೆ ಸಾಮಾನ್ಯ ವೇಷದಲ್ಲಿರುವ ಪೊಲೀಸರ ಕೈಯಲ್ಲಿ ಶಸ್ತ್ರಾಸ್ತ್ರಗಳು ಇವೆ. ಹೀಗಾಗಿ ಇವರು ಕ್ರಿಮಿನಲ್ಸ್ ಎಂದು ಸ್ಥಳೀಯರು ಭಾವಿಸಿದ್ದಾರೆ. ವಾಹನ ಅಡ್ಡಗಡ್ಡಿ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಅಸ್ಸಾಂ ಪೊಲೀಸರ ಪ್ರಯಾಣ ನಾಗಲ್ಯಾಂಡ್ ರಾಜ್ಯದ ಮೊಕಾಕುಚುಂಗ್ ಜಿಲ್ಲೆಗೆ ತಲುಪಿದೆ. ಅಸ್ಸಾಂ ಪೊಲೀಸರು ತಮ್ಮ ಭಾಷೆ, ಹಿಂದಿ, ಇಂಗ್ಲೀಷ್‌ನಲ್ಲಿ ಹೇಳಿದರೂ ನಾಗಾಲ್ಯಾಂಡ್ ಮೊಕಾಕುಚುಂಗ್ ಸ್ಥಳೀಯರಿಗೆ ಅರ್ಥವಾಗುತ್ತಿಲ್ಲ. ಸ್ಥಳೀಯರು ಪೊಲೀಸರನ್ನು ಒಂದು ರಾತ್ರಿ ಇಡೀ ಬಂಧನದಲ್ಲಿ ಇರಿಸಿದ್ದಾರೆ. ತಾವು ಅಸ್ಸಾಂ ಪೊಲೀಸರು ಎಂದು ಎಷ್ಟು ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿ ಸ್ಥಳೀಯರು ಇರಲಿಲ್ಲ. ನೆಟ್‌ವರ್ಕ್ ಸರಿಯಾಗಿ ಸಿಗುತ್ತಿಲ್ಲದ ಕಾರಣ ಪೊಲೀಸರು ಹೈರಾಣಾಗಿದ್ದಾರೆ. ಈ ವಿಚಾರ ಅಸ್ಸಾಂ ಪೊಲೀಸರಿಗೆ ತಿಳಿದಿದೆ. ತಕ್ಷಣ ಮೊಕಾಕುಚುಂಗ್ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ನಾಗ್ಯಾಲಾಂಡ್ ಜಿಲ್ಲಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಸ್ಥಳೀಯರಿಂದ ಅಸ್ಸಾಂ ಪೊಲೀಸರನ್ನು ಬಂಧಮುಕ್ತಗೊಳಿಸಿದ್ದಾರೆ. ಸ್ಥಳೀಯರ ದಾಳಿಯಲ್ಲಿ ಒಬ್ಬ ಪೊಲೀಸ್ ಗಾಯಗೊಂಡಿದ್ದಾರೆ.