Asianet Suvarna News Asianet Suvarna News

Asianet News ಸಂವಾದ: 2 ದಶಕ ಕಳೆದರೂ ಆ ದುರಂತ ಮರೆಯಲಾಗುತ್ತಿಲ್ಲ..!

3000 ಜನರನ್ನು ಬಲಿ ಪಡೆದ ಅಮೆರಿಕದ ನ್ಯೂಯಾರ್ಕ್‌ನಲ್ಲಿನ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ಭಯೋತ್ಪಾದಕ ದಾಳಿಗೆ 21 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಏಷ್ಯಾನೆಟ್‌ ನ್ಯೂಸ್‌ನ ಅಮೆರಿಕದ ಪ್ರತಿನಿಧಿ ಆ ದುರಂತದಲ್ಲಿ ಬದುಕುಳಿದ ವ್ಯಕ್ತಿ, ದುರಂತದಲ್ಲಿ ಸೋದರನನ್ನು ಕಳೆದುಕೊಂಡ ವ್ಯಕ್ತಿ ಹಾಗೂ ಇನ್ನೊಬ್ಬ ಭದ್ರತಾ ತಜ್ಞನ ಜೊತೆ ಸಂವಾದ ನಡೆಸಿದ್ದಾರೆ. ಸಂದರ್ಶಿತರು ಬಿಚ್ಚಿಟ್ಟ ಜಗತ್ತಿನ ಅತ್ಯಂತ ಭೀಕರ ದಾಳಿಯ ನೆನಪುಗಳು ಇಲ್ಲಿವೆ. 

asianet news samvada on us  9/11 attack survivor ash
Author
First Published Sep 12, 2022, 10:37 AM IST

3000 ಜನರನ್ನು ಬಲಿ ಪಡೆದ ಅಮೆರಿಕದ ನ್ಯೂಯಾರ್ಕ್‌ನಲ್ಲಿನ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ಭಯೋತ್ಪಾದಕ ದಾಳಿಗೆ 21 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಏಷ್ಯಾನೆಟ್‌ ನ್ಯೂಸ್‌ನ ಅಮೆರಿಕದ ಪ್ರತಿನಿಧಿ ಆ ದುರಂತದಲ್ಲಿ ಬದುಕುಳಿದ ವ್ಯಕ್ತಿ, ದುರಂತದಲ್ಲಿ ಸೋದರನನ್ನು ಕಳೆದುಕೊಂಡ ವ್ಯಕ್ತಿ ಹಾಗೂ ಇನ್ನೊಬ್ಬ ಭದ್ರತಾ ತಜ್ಞನ ಜೊತೆ ಸಂವಾದ ನಡೆಸಿದ್ದಾರೆ. ಸಂದರ್ಶಿತರು ಬಿಚ್ಚಿಟ್ಟ ಜಗತ್ತಿನ ಅತ್ಯಂತ ಭೀಕರ ದಾಳಿಯ ನೆನಪುಗಳು ಇಲ್ಲಿವೆ. 

ಸ್ಟ್ಯಾನ್ಲಿ ಪ್ರೇಮನಾಥ್‌, ದುರಂತದಲ್ಲಿ ಬದುಕುಳಿದ ವ್ಯಕ್ತಿ ಅವರೊಂದಿಗೆ ನಡೆಸಿದ ಸಂದರ್ಶನದ ವಿವರ..

21 ವರ್ಷಗಳ ಹಿಂದೆ ಆ ದಿನ ಏನಾಯಿತು? ನೀವು ಆ ದುರಂತದಿಂದ ಹೇಗೆ ಬದುಕುಳಿದಿರಿ?

ನಾನು ಮೊದಲು ನೋಡಿದಾಗ ಉತ್ತರದಲ್ಲಿರುವ ಟವರ್‌ನಿಂದ ಬೆಂಕಿಯ ಉಂಡೆಗಳು ಉದುರಿ ಬೀಳುತ್ತಿದ್ದವು. ಅದನ್ನು ನೋಡಿದ ನಮಗೆಲ್ಲಾ ಅಲ್ಲಿ ಏನಾಗುತ್ತಿದೆ ಎಂದು ಊಹಿಸಲು ಆಗಲಿಲ್ಲ. ತಕ್ಷಣ ನಾನಿದ್ದ ಸ್ಥಳದಿಂದ ಓಡಿ ಹೋಗಿ ನನ್ನ ಬಾಸ್‌ಗೆ ಕರೆ ಮಾಡಿದೆ. ಆದರೆ ಅವರು ಫೋನ್‌ ರಿಸೀವ್‌ ಮಾಡಲಿಲ್ಲ. ಹಾಗಾಗಿ ಅಲ್ಲಿದ್ದ ನನ್ನ ಸಹೋದ್ಯೋಗಿಗಳಿಗೆ ಇಲ್ಲಿಂದ ಓಡಿಹೋಗೋಣ ಎಂದು ಹೇಳಿದೆ. ನಾವೆಲ್ಲರೂ ದಕ್ಷಿಣದಲ್ಲಿರುವ ಕಟ್ಟಡದ 81ನೇ ಮಹಡಿಯಲ್ಲಿದ್ದೆವು. ದುರಂತದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನಾವೆಲ್ಲರೂ ಕಟ್ಟಡದ ದಕ್ಷಿಣ ದಿಕ್ಕಿಗೆ ಓಡಿದೆವು. ಅಲ್ಲಿದ್ದ ಲಿಫ್‌್ಟಬಳಸಿ ನೆಲಮಹಡಿಯನ್ನು ತಲುಪಿದೆವು. ನಾವು ಕೆಳಗಿಳಿದ ಎಲಿವೇಟರ್‌ನಲ್ಲಿ ನನ್ನನ್ನು ಸೇರಿ 18 ಮಂದಿ ಇದ್ದೆವು. ಎಲ್ಲರೂ ಸುರಕ್ಷಿತವಾಗಿ ಕಟ್ಟಡದಿಂದ ಹೊರಬಂದೆವು. ಓರ್ವ ಮಾತ್ರ ಕಟ್ಟಡದಲ್ಲೇ ಉಳಿದುಕೊಂಡಿರುವುದು ಗಮನಕ್ಕೆ ಬಂದು ಫೋನ್‌ ಮಾಡಿ ಹೊರ ಬರುವಂತೆ ಹೇಳಿದೆ. ಆದರೆ ಆತ ಯಾಕೆ ಎಂದು ಕೇಳುತ್ತಿದ್ದಂತೆ ಮತ್ತೊಂದು ಹಸಿರು ರೆಕ್ಕೆಗಳುಳ್ಳ ವಿಮಾನ ನನ್ನ ತಲೆಯ ಮೇಲೆ ಹಾರಿ ಬಂದು ಕಟ್ಟಡಕ್ಕೆ ಡಿಕ್ಕಿ ಹೊಡೆಯಿತು. ಅದಾದ ನಂತರ ಆ ವ್ಯಕ್ತಿಯನ್ನು ನಾನು ನೋಡಲೇ ಇಲ್ಲ. ಆದರೆ ನಾವು 18 ಮಂದಿ ಯಾವುದೇ ತೊಂದರೆಯಾಗದಂತೆ ಸುರಕ್ಷಿತವಾಗಿ ಅಲ್ಲಿಂದ ಹೊರಬಂದಿದ್ದೆವು. ಕೆಲವೇ ಕ್ಷಣಗಳಲ್ಲಿ ಕಟ್ಟಡದಲ್ಲಿ ಬೆಂಕಿ ಮತ್ತು ಭಯಂಕರ ಹೊಗೆ ಕಾಣಿಸಿಕೊಂಡಿತು.

ದುರಂತದಲ್ಲಿ 3 ಸಾವಿರ ಜನರು ಅಸುನೀಗಿದರು. ದುರಂತದಲ್ಲಿ ಬಚಾವಾದ ನಿಮಗೆ ಇದನ್ನು ಕೇಳಿದಾಗೆಲ್ಲಾ ಏನೆನ್ನಿಸುತ್ತದೆ?

ದುರಂತ ನಡೆದ ನಂತರ ಎರಡು ಮೂರು ದಿನದವರೆಗೆ ನನಗೆ ಯಾರನ್ನೂ ಗುರುತಿಸಲು ಆಗುತ್ತಿರಲಿಲ್ಲ. ನನ್ನ ಮೆದುಳು ಕೆಲಸ ಮಾಡುವುದನ್ನೇ ನಿಲ್ಲಿಸಿತ್ತು. ಅದಾದ ನಂತರ ನನ್ನ ಮನೆಯವರನ್ನು ಗುರುತಿಸಲು ಆರಂಭಿಸಿದೆ. ವಾರದ ನಂತರ ಎಲ್ಲಾ ವಿಷಯಗಳು ನೆನಪಿಗೆ ಬರಲು ಆರಂಭಿಸಿದವು. ಆದರೆ ದುರಂತ ನಿಜವಾಗಲೂ ನಡೆಯಿತೋ ಅಥವಾ ಕನಸೋ ಎಂಬ ಅನುಮಾನ ಮಾತ್ರ ಕಡಿಮೆಯಾಗಿರಲಿಲ್ಲ. 21 ವರ್ಷಗಳ ನಂತರವೂ ಆ ಘಟನೆ ನನಗೆ ಚೆನ್ನಾಗಿ ನೆನಪಿದೆ. ನನ್ನ ತಲೆಯ ಮೇಲೆ ವಿಮಾನ ಹಾರಿಬಂದಿದ್ದು, ಕಟ್ಟಡದ ಬಳಿ ಬರುತ್ತಿದ್ದಂತೆ ಸ್ವಲ್ಪ ಓರೆಯಾಗಿ ಕಟ್ಟಡಕ್ಕೆ ಡಿಕ್ಕಿಯಾಗಿದ್ದು ಸ್ಪಷ್ಟವಾಗಿ ನೆನಪಿದೆ. ಪ್ರತಿದಿನ ಮಲಗುವ ಮೊದಲು ಆ ವಿಮಾನದ ಶಬ್ದ ನನ್ನ ಕಿವಿಗೆ ಅಪ್ಪಳಿಸುತ್ತದೆ. ಕಟ್ಟಡ ಕುಸಿದು ಬೀಳುತ್ತಿರುವುದು ಕಾಣುತ್ತದೆ. ನಾನು ಬದುಕಿರುವುದಕ್ಕೆ ದೇವರು ಮಾತ್ರ ಕಾರಣ ಎಂದು ನನಗೆ ಪ್ರತಿಬಾರಿ ಎನಿಸುತ್ತದೆ. ದುರಂತದಲ್ಲಿ 3 ಸಾವಿರ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಇದಾದ ಬಳಿಕ ದಿನವೂ ಉತ್ತರವೇ ಸಿಗದ ಪ್ರಶ್ನೆಯೊಂದನ್ನು ದೇವರಲ್ಲಿ ಕೇಳುತ್ತಿದ್ದೇನೆ. ಅವರ ಮೇಲೆ ಏಕೆ ನಿನ್ನ ಕರುಣೆ ಇರಲಿಲ್ಲ? ಅವರೆಲ್ಲಾ ಈ ರೀತಿಯಾಗಿ ಅಸುನೀಗಲು ಏನು ಪಾಪ ಮಾಡಿದ್ದರು? ಆದರೆ ನಾನು ಬದುಕಿರುವುದಕ್ಕೆ ಮಾತ್ರ ದೇವರಷ್ಟೇ ಕಾರಣ ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ.

9/11 ಮೆಮೋರಿಯಲ್‌ಗೆ ಪ್ರತಿ ವರ್ಷ ಭೇಟಿ ನೀಡುತ್ತೀರಾ? ದುರಂತ ಬಳಿಕ ನಿಮ್ಮ ಬದುಕಲ್ಲಾದ ಬದಲಾವಣೆ ಏನು?

ನಾನು 2 ಬಾರಿ ಮಾತ್ರ ಅಲ್ಲಿಗೆ ಭೇಟಿ ನೀಡಿದ್ದೇನೆ. ದುರಂತದಲ್ಲಿ ಮಡಿದವರ ನೆನಪಿನಲ್ಲಿ ಪ್ರತಿವರ್ಷ ಸೆ.11ರಂದು ಇಲ್ಲಿ ಸ್ಮರಣೆಯ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಆದರೆ ನಾನು ಅಲ್ಲಿ ನಡೆಯುವ ಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಈ ಸ್ಥಳವನ್ನು ನಾನು ಅತ್ಯಂತ ಪವಿತ್ರ ಎಂದು ಭಾವಿಸುತ್ತೇನೆ. ಅಲ್ಲಿಗೆ ನಾವು ಕುಟುಂಬದ ಜೊತೆ ಹೋಗಬೇಕಾದರೆ ಏನೋ ತಪ್ಪಿತಸ್ಥ ಭಾವನೆ ನನ್ನನ್ನು ಕಾಡುತ್ತದೆ. ಹಾಗಾಗಿ ಅಲ್ಲಿಗೆ ಹೋಗಲು ನಾನು ಬಯಸುವುದಿಲ್ಲ. 9/11 ದುರಂತದ ಬಳಿಕ ನನ್ನ ಬದುಕಲ್ಲಿ ಸಾಕಷ್ಟುಬದಲಾವಣೆಗಳಾಗಿವೆ. ಅದರಲ್ಲಿ ಪ್ರಮುಖವಾದುದೆಂದರೆ ನನಗೆ ಪರವಾನಗಿ ಇರುವ ಧರ್ಮಬೋಧಕನ ಸ್ಥಾನ ಸಿಕ್ಕಿದ್ದು. ದೇವರು ನಮ್ಮ ಮೇಲೆ ಹೇಗೆ ತನ್ನ ಕೃಪೆ ತೋರಿ ನಮ್ಮನ್ನು ಬದುಕಿಸುತ್ತಾನೆ ಎಂಬುದನ್ನು ಜನರಿಗೆ ತಿಳಿಸಿಕೊಡುವ ಅವಕಾಶ ನನಗೆ ಸಿಕ್ಕಿತು. ಅಮೆರಿಕದ ಬಹಳಷ್ಟುಶಾಲೆಗಳು, ಕಚೇರಿಗಳು, ಚಚ್‌ರ್‍ಗಳಿಗೆ ಭೇಟಿ ನೀಡಿ ದೇವರ ದಯೆಯ ಬಗ್ಗೆ ತಿಳಿಸುವ ಅವಕಾಶ ನನಗೆ ದೊರೆಯಿತು. ಕೆಟ್ಟಜನರು ಕೆಟ್ಟದನ್ನೇ ಮಾಡುತ್ತಾರೆ, ಹಾಗಾಗಿ ಪ್ರೀತಿಯನ್ನಷ್ಟೇ ಹಂಚಿ, ದೇವರಲ್ಲಿ ನಿಮ್ಮ ನಂಬಿಕೆಯನ್ನು ಇಡಿ, ಅವನು ಕಾಪಾಡುತ್ತೇನೆ ಎಂದು ಎಲ್ಲರಿಗೂ ಹೇಳುತ್ತೇನೆ.

ಚೆರಿಯನ್‌ ಮಥಾಯ್‌, ದುರಂತದಲ್ಲಿ ಸೋದರನನ್ನು ಕಳೆದುಕೊಂಡ ವ್ಯಕ್ತಿ

ಸೆಪ್ಟೆಂಬರ್‌ 11ರ ಬಗ್ಗೆ ಕೇಳಿದಾಗ ನಿಮಗೆ ಏನೆನ್ನಿಸುತ್ತದೆ?

ಇದು ನನಗೆ ನಷ್ಟದ ದಿನ. ಆದರೆ ಈ ದುರಂತ ದೇಶದ ಇತಿಹಾಸದಲ್ಲಿ ಅಳಿಸಲಾಗದ ಗುರುತನ್ನು ಮೂಡಿಸಿದೆ. ಈ ದುರಂತದಲ್ಲಿ ನನ್ನ ಸೋದರ ತೀರಿಕೊಂಡಿದ್ದಾನೆ ಎಂಬುದನ್ನು ಅರಗಿಸಿಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ. ಕೇಂಬ್ರಿಡ್ಜ್‌ನಲ್ಲಿ ಓದಿದ್ದ ನನ್ನ ಸೋದರ ಜೋಸೆಫ್‌ ಮಥಾಯ್‌ನ ವೃತ್ತಿ ಬದುಕು ಏರುಗತಿಯಲ್ಲಿದ್ದ ಸಮಯದಲ್ಲಿ ನಾವು ಅವನನ್ನು ಕಳೆದುಕೊಂಡೆವು. 2 ಚಿಕ್ಕಮಕ್ಕಳು ಮತ್ತು ಜೋಸೆಫ್‌ನ ಪತ್ನಿಗೆ ಇದರಿಂದ ಹೊರಬರುವುದು ಬಹಳ ಕಷ್ಟವಾಯಿತು. ಪ್ರತಿ ಬಾರಿ ದುರಂತದ ಚಿತ್ರಗಳನ್ನು ನೋಡುವಾಗ, ಸುದ್ದಿಗಳನ್ನು ಓದುವಾಗ ನನ್ನ ಸೋದರ ನೆನಪಿಗೆ ಬರುತ್ತಾನೆ. ಪ್ರತಿ ವರ್ಷ ಇಲ್ಲಿ ಸೆ.11ರಂದು ಸ್ಮರಣಾ ದಿನವನ್ನು ಆಚರಿಸಲಾಗುತ್ತದೆ. ನಾನೂ ಸಹ ಪ್ರತಿ ವರ್ಷ ಸ್ಮಾರಕಕ್ಕೆ ಭೇಟಿ ನೀಡುತ್ತೇನೆ. ಸೋದರ ಸಾವನ್ನಪ್ಪಿದ ಆರಂಭದ ವರ್ಷಗಳಲ್ಲಿ ಸೆ.11ರಂದು ಭೇಟಿ ನೀಡುತ್ತಿದ್ದೆ. ಆನಂತರದ ವರ್ಷಗಳಲ್ಲಿ ಸೆ.11ರಂದು ಸ್ಮಾರಕದ ಬಳಿ ಜನರ ಸಂಖ್ಯೆ ಹೆಚ್ಚಾದ ಕಾರಣದಿಂದಾಗಿ ಬೇರೆಯ ದಿನಗಳಲ್ಲಿ ಭೇಟಿ ನೀಡುವುದಕ್ಕೆ ಆರಂಭಿಸಿದೆ. ಜನ ಕಡಿಮೆ ಇರುವ ದಿನಗಳಲ್ಲಿ ಬಂದು ಇಲ್ಲಿ ಕೂತು ಸೋದರನೊಂದಿಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತೇನೆ.

ಭಯೋತ್ಪಾದನೆಯ ಹಲವು ಘಟನೆಗಳನ್ನು ಪ್ರತಿನಿತ್ಯ ನಾವು ನೋಡುತ್ತಿದ್ದೇವೆ. ಇದನ್ನೆಲ್ಲಾ ಕೇಳಿದಾಗ ನಿಮಗೆ ಏನನ್ನಿಸುತ್ತದೆ?

ಪ್ರತಿನಿತ್ಯ ಇಂತಹ ಚಟುವಟಿಕೆಗಳು ಜಗತ್ತಿನಾದ್ಯಂತ ನಡೆಯುತ್ತಲೇ ಇವೆ. ಇವುಗಳನ್ನು ನೀವು ಭಯೋತ್ಪಾನೆ ಅಥವಾ ಬೇರೆಯ ಹೆಸರಿನಿಂದ ಕರೆಯಬಹುದು. 9/11 ದುರಂತದ ಬಳಿಕವೂ ಬಹಳಷ್ಟುಉಗ್ರ ಚಟುವಟಿಕೆಗಳು ನಡೆಯುತ್ತಿವೆ. ಇವುಗಳನ್ನು ಕೇವಲ ಉಗ್ರ ಚಟುವಟಿಕೆಗಳು ಎಂದು ಕರೆಯಲಾಗುವುದಿಲ್ಲ. ಇವುಗಳು ಅಲ್ಲಿನ ಸರ್ಕಾರಗಳ ಸೋಲು ಸಹ ಆಗಿರುತ್ತವೆ. ಭಯೋತ್ಪಾದನಾ ಕೃತ್ಯಗಳನ್ನು ಯಾರು ಮಾಡುತ್ತಿದ್ದಾರೆ ಎಂಬುದು ಎಂದಿಗೂ ಮುಖ್ಯವಾಗುವುದಿಲ್ಲ. ಆದರೆ ಇದರಿಂದ ನಾಶವಾಗುತ್ತಿರುವುದು ಮಾತ್ರ ಮನುಷ್ಯರ ಜೀವ. ಇಂತಹವುಗಳು ನಡೆದಾಗ ಅವುಗಳನ್ನು ದುರಂತ ಎಂದು ಕರೆದು ಸುಮ್ಮನಾಗಬಹುದು. ಆದರೆ ಅದು ನಮ್ಮ ಕುಟುಂಬಕ್ಕೆ ಸಂಭವಿಸಿದಾಗ ಅವುಗಳನ್ನು ಸುಲಭವಾಗಿ ಅರಗಿಸಿಕೊಳ್ಳಲಾಗುವುದಿಲ್ಲ. 9/11 ದುರಂತದಲ್ಲಿ ಸಾವಿರಾರು ಜನರು ಸಾವನ್ನಪ್ಪಿದರು. ಅವರ ಕುಟುಂಬದವರಿಗೆಲ್ಲಾ ಇದು ಕೇವಲ ದುರಂತವಷ್ಟೇ ಅಲ್ಲ, ಅವರ ಕುಟುಂಬಕ್ಕಾದ ವೈಯಕ್ತಿಕ ನಷ್ಟ.

ಸಬು ನಾಯರ್‌, ಡೆಪ್ಯುಟಿ ಡೈರೆಕ್ಟರ್‌, ಏಷ್ಯನ್‌ ಅಮೆರಿಕನ್‌ ಅಫೇರ್ಸ್‌

9/11 ದುರಂತದ ಕುರಿತು ನಿಮ್ಮ ವೈಯಕ್ತಿಕ ನೆನಪುಗಳೇನು? ಅವರ ಕುಟುಂಬದವರಿಗೆ ಏನು ಹೇಳಲು ಬಯಸುತ್ತೀರಿ?

ದೊಡ್ಡ ಕಟ್ಟಡವೊಂದಕ್ಕೆ ವಿಮಾನ ಬಂದು ಡಿಕ್ಕಿ ಹೊಡೆದದ್ದು, ಕಟ್ಟಡ ಕುಸಿದು ಬೀಳುತ್ತಿರುವ ವಿಡಿಯೋವನ್ನು ಮೊದಲ ಬಾರಿ ನೋಡಿದಾಗ ಇದು ಯಾವುದೋ ಸಿನಿಮಾದ ಟ್ರೈಲರ್‌ ಇರಬಹುದು ಎಂದುಕೊಂಡಿದ್ದೆ. ಆನಂತರ ನ್ಯೂಸ್‌ಗಳಲ್ಲಿ ಹೆಡ್‌ಲೈನ್‌ ನೋಡಿದಾಗ ನ್ಯೂಯಾರ್ಕ್ನ ಅತಿದೊಡ್ಡ ಕಟ್ಟಡವೊಂದು ಉಗ್ರರ ದಾಳಿಗೆ ಬಲಿಯಾಗಿದೆ ಎಂಬುದು ಮನದಟ್ಟಾಯಿತು. ಆನಂತರ ಈ ವಿಡಿಯೋವನ್ನು ನೋಡುವುದು ತುಂಬಾ ನೋವು ಉಂಟುಮಾಡುತ್ತಿತ್ತು. ನ್ಯೂಯಾರ್ಕ್ನಲ್ಲಿರುವ ಸ್ನೇಹಿತರು ಈ ಘಟನೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಪ್ರತಿಬಾರಿಯೂ ಹೇಳುತ್ತಿದ್ದರು. ಈ ದುರಂತದಲ್ಲಿ ಮಡಿದವರ ನೆನಪುಗಳಿಗಾಗಿ ನಿರ್ಮಾಣ ಮಾಡಲಾಗುತ್ತಿರುವ ಸ್ಮಾರಕ ಭವನ ಸಮಿತಿಗೆ ನಾನು ಸದಸ್ಯನಾಗಿದ್ದೆ. ಪ್ರತಿಬಾರಿಯೂ ಸ್ಮಾರಕ ಭವನವನ್ನು ನೋಡಿದಾಗ ದುರಂತ ನೆನಪಾಗುತ್ತದೆ. ದುರಂತದಲ್ಲಿ ಮಡಿದವರು ನೆನಪಾಗುತ್ತಾರೆ. ದುರಂತ ನಡೆದ ಬಳಿಕ ಜನರು ನಿಮಗೆ ತೋರಿಸುತ್ತಿರುವ ಪ್ರೀತಿಯನ್ನು ಅನುಭವಿಸಿ, ಪ್ರೀತಿಯಷ್ಟೇ ಜಗತ್ತನ್ನು ಶಾಂತವಾಗಿಡಬಲ್ಲದು. ಮತ್ತೊಮ್ಮೆ ಜಗತ್ತಿನ ಯಾವ ಭಾಗದಲ್ಲೂ ಈ ರೀತಿಯ ದುರಂತ ನಡೆಯಬಾರದು ಎಂದು ನಾನು ಬಯಸುತ್ತೇನೆ.

ವರದಿ - ಡಾ. ಕೃಷ್ಣ ಕಿಶೋರ್‌, ಏಷ್ಯಾನೆಟ್‌ ನ್ಯೂಸ್‌ ಅಮೆರಿಕ ಪ್ರತಿನಿಧಿ

Follow Us:
Download App:
  • android
  • ios