Asianet Suvarna News Asianet Suvarna News

2013ರ ಅತ್ಯಾಚಾರ ಪ್ರಕರಣ: ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿದ ಗುಜರಾತ್‌ ಕೋರ್ಟ್‌

ಈ ಪ್ರಕರಣದಲ್ಲಿ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿ ಕೂಡ ಆರೋಪಿಯಾಗಿದ್ದರು. ಅಲ್ಲದೆ, ಅಸಾರಾಂ ಬಾಪು ಪತ್ನಿ ಲಕ್ಷ್ಮೀ, ಮಗಳು ಭಾರತಿ ಮತ್ತು ನಾಲ್ವರು ಮಹಿಳಾ ಅನುಯಾಯಿಗಳಾದ ಧ್ರುವಬೆನ್, ನಿರ್ಮಲಾ, ಜಸ್ಸಿ ಮತ್ತು ಮೀರಾ ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.

asaram bapu jailed for life in 2013 rape case gujarat sessions court ash
Author
First Published Jan 31, 2023, 4:13 PM IST

ಗಾಂಧಿನಗರ (ಜನವರಿ 31, 2023): 2013 ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುರನ್ನು ದೋಷಿ ಎಂದು ನಿನ್ನೆ (ಜನವರಿ 30) ತೀರ್ಪು ನೀಡಿದ್ದ ಗುಜರಾತ್‌ ಕೋರ್ಟ್‌ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ಗುಜರಾತ್‌ನ  ಗಾಂಧಿನಗರದ ಸೆಷನ್ಸ್ ನ್ಯಾಯಾಲಯವು ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸುಮಾರು 10 ವರ್ಷಗಳ ಹಿಂದೆ ಅಹಮದಾಬಾದ್‌ನ ಮೊಟೆರಾದಲ್ಲಿರುವ ತನ್ನ ಆಶ್ರಮದಲ್ಲಿ ಅಸಾರಾಮ್ ಬಾಪು ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು ಸೂರತ್ ಮೂಲದ ಮಹಿಳೆಯೊಬ್ಬರು ದೂರು ನೀಡಿದ್ದರು. 

ಈ ಪ್ರಕರಣದಲ್ಲಿ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿ ಕೂಡ ಆರೋಪಿಯಾಗಿದ್ದರು. ಅಲ್ಲದೆ, ಅಸಾರಾಂ ಬಾಪು ಪತ್ನಿ ಲಕ್ಷ್ಮೀ, ಮಗಳು ಭಾರತಿ ಮತ್ತು ನಾಲ್ವರು ಮಹಿಳಾ ಅನುಯಾಯಿಗಳಾದ ಧ್ರುವಬೆನ್, ನಿರ್ಮಲಾ, ಜಸ್ಸಿ ಮತ್ತು ಮೀರಾ ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಆದರೆ,  ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ (Lack of Evidence) ಅಸಾರಾಂ ಬಾಪು (Asaram Bapu) ಪತ್ನಿ (Wife) ಸೇರಿದಂತೆ ಇತರ ಆರು ಆರೋಪಿಗಳನ್ನು (Accused) ನ್ಯಾಯಾಲಯ (Court) ಜನವರಿ 30 ರಂದು ಖುಲಾಸೆಗೊಳಿಸಿದೆ. ಅಹಮದಾಬಾದ್‌ನ (Ahmedabad) ಚಂದ್‌ಖೇಡಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ (FIR) ಪ್ರಕಾರ, ಅಸಾರಾಂ ಬಾಪು 2001 ರಿಂದ 2006 ರವರೆಗೆ ನಗರದ ಹೊರವಲಯದಲ್ಲಿರುವ ತನ್ನ ಆಶ್ರಮದಲ್ಲಿ ಮಹಿಳೆಯ ಮೇಲೆ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಇದನ್ನು ಓದಿ: ಅತ್ಯಾಚಾರ ಪ್ರಕರಣ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ; ಗುಜರಾತ್ ಕೋರ್ಟ್‌ ತೀರ್ಪು

ಗಾಂಧಿನಗರದ ಸೆಷನ್ಸ್‌ ನ್ಯಾಯಾಲಯವು ಪ್ರಾಸಿಕ್ಯೂಷನ್ ಪ್ರಕರಣವನ್ನು ಸ್ವೀಕರಿಸಿದೆ ಮತ್ತು ಸೆಕ್ಷನ್ 376 2 (ಸಿ) (ಅತ್ಯಾಚಾರ), 377 (ಅಸ್ವಾಭಾವಿಕ ಅಪರಾಧಗಳು) ಮತ್ತು ಅಕ್ರಮ ಬಂಧನಕ್ಕಾಗಿ ಭಾರತೀಯ ದಂಡ ಸಂಹಿತೆಯ ಇತರ ನಿಬಂಧನೆಗಳ ಅಡಿಯಲ್ಲಿ ಅಸಾರಾಂನನ್ನು ದೋಷಿ ಎಂದು ತೀರ್ಪು ನೀಡಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್‌ಸಿ ಕೊಡೇಕರ್ ಸೋಮವಾರ ಮಾಹಿತಿ ನೀಡಿದ್ದರು. ಈ ಮಧ್ಯೆ, ವಿವಾದಿತ ಹಾಗೂ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಜೋಧಪುರದ ಜೈಲಿನಲ್ಲಿದ್ದಾರೆ.

ಸೂರತ್ ಮೂಲದ ಮಹಿಳೆಯೊಬ್ಬರು ಅಸಾರಾಂ ಬಾಪು ಮತ್ತು ಇತರ 7 ಜನರ ವಿರುದ್ಧ ಅತ್ಯಾಚಾರ ಮತ್ತು ಅಕ್ರಮ ಬಂಧನದ ಪ್ರಕರಣವನ್ನು ದಾಖಲಿಸಿದ್ದರು. ಈ ಪೈಕಿ ಒಬ್ಬರು ವಿಚಾರಣೆ ಬಾಕಿ ಇರುವಾಗಲೇ ಅಕ್ಟೋಬರ್ 2013 ರಲ್ಲಿ ಮೃತಪಟ್ಟಿದ್ದರು. ಬಳಿಕ ಜುಲೈ 2014 ರಲ್ಲಿ ಗುಜರಾತ್ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ: ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಅಸಾರಾಂ ಬಾಪು ಆಶ್ರಮದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಪತ್ತೆ!

ಪ್ರಕರಣದ ತನಿಖೆಯ ಉದ್ದಕ್ಕೂ, 68 ಜನರ ಹೇಳಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನು, ಈ ಪ್ರಕರಣದ ತನಿಖೆ ವೇಳೆ ತನಿಖಾಧಿಕಾರಿ ದಿವ್ಯಾ ರವಿಯಾ ಅವರಿಗೆ ಹಲವು ಬಾರಿ ಕೊಲೆ ಬೆದರಿಕೆಗಳು ಬಂದಿದ್ದವು ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳಾಗಿದ್ದು, ಅವರಲ್ಲಿ ಒಬ್ಬರು ಅಪ್ರೂವರ್‌ ಆಗಿದ್ದರು. 

ಮತ್ತೊಂದು ಪ್ರಕರಣದಲ್ಲಿ, 2018 ರಲ್ಲಿ, ಜೋಧಪುರದ ವಿಚಾರಣಾ ನ್ಯಾಯಾಲಯವು ಪ್ರತ್ಯೇಕ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅವರನ್ನು ದೋಷಿ ಎಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಿತ್ತು. 2013ರಲ್ಲಿ ಜೋಧಪುರದ ಆಶ್ರಮದಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಸಾರಾಂ ಬಾಪು ತಪ್ಪಿತಸ್ಥನೆಂದು ಸಾಬೀತಾಗಿದೆ.

ಆ ಸಮಯದಲ್ಲಿ, 77 ವರ್ಷ ವಯಸ್ಸಿನ ದೇವಮಾನವನನ್ನು ಐಪಿಸಿಯ ಸೆಕ್ಷನ್ 376, ಲೈಂಗಿಕ ಅಪರಾಧಗಳ (ಪೋಕ್ಸೋ) ಕಾಯ್ದೆಯ ಅಡಿಯಲ್ಲಿ ಮಕ್ಕಳ ರಕ್ಷಣೆ ಮತ್ತು ಬಾಲಾಪರಾಧಿ ನ್ಯಾಯ (ಜೆಜೆ) ಕಾಯ್ದೆಯ ಅಡಿಯಲ್ಲಿ ದೋಷಿ ಎಂದು ಘೋಷಿಸಲಾಯಿತು. ಅಸಾರಾಂ ಬಾಪು ಅವರನ್ನು ಇಂದೋರ್‌ನಿಂದ 2013ರ ಆಗಸ್ಟ್‌ನಲ್ಲಿ ಬಂಧಿಸಿ, 2013ರ ಸೆಪ್ಟೆಂಬರ್‌ನಲ್ಲಿ ಜೋಧಪುರಕ್ಕೆ ಕರೆತರಲಾಗಿತ್ತು.

Follow Us:
Download App:
  • android
  • ios